ಬಂಟ್ಸ್ ನಿಗಮದಿಂದ ಬಡ ಕುಟುಂಬಗಳಿಗೆ ಬಲ: ಡಾ. ಮಂಜುನಾಥ ಭಂಡಾರಿ

ಮಂಗಳೂರು, ಅ. 31: ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ರಾಜ್ಯ ಸರಕಾರವು ಬಂಟ್ಸ್ ನಿಗಮ ಘೋಷಣೆ ಮಾಡುವ ಮೂಲಕ ಸಮುದಾಯದ ಶೇ. 60ರಷ್ಟು ಬಡ ಕುಟುಂಬಗಳಿಗೆ ಆರ್ಥಿಕ ಶಕ್ತಿ ತುಂಬುವ ಜತೆಗೆ ಸಮುದಾಯದ ಸಾಂಸ್ಕೃತಿಕ ಹಿನ್ನೆಲೆ, ಸಮಾಜಕ್ಕೆ ನೀಡಿರುವ ಕೊಡುಗೆಯ ಬಗ್ಗೆ ಅಧ್ಯಯನ ನಡೆಸಲು ಸಹಕಾರಿ ಯಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಅಭಿಪ್ರಾಯಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ಮಲೆನಾಡು ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆಯಲ್ಲಿ ನೀಡಿರುವ ಘೋಷಣೆಗಳನ್ನು 100 ದಿನದಲ್ಲಿ ಕಾರ್ಯರೂಪಕ್ಕೆ ತರುವ ಪ್ರಯತ್ನವಾಗಿದೆ ಎಂದರು.
ಬಿಜೆಪಿಯವರು ಚುನಾವಣಾ ಪೂರ್ವದಲ್ಲೇ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಅಪಸ್ವರ ಎತ್ತಿ ಮಾಡಲು ಸಾಧ್ಯವಿಲ್ಲ ಎಂದಿತ್ತು. ಈಗ ಗ್ಯಾರಂಟಿಗಳನ್ನು ನಿಲ್ಲಿಸಲಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದೆ. ಆದರೆನಾಲ್ಕು ತಿಂಗಳ ಅವಧಿಯಲ್ಲೇ ಪ್ರಮುಖ ಗ್ಯಾರಂಟಿಗಳನ್ನು ಸರಕಾರ ಜಾರಿಗೊಳಿಸಿದೆ. ಹಂತ ಹಂತವಾಗಿ ಎಲ್ಲಾ ಗ್ಯಾರಂಟಿಗಳು, ಆಶ್ವಾಸನಗಳನ್ನು ಹಂತಹಂತ ವಾಗಿ ಜಾರಿಗೊಳಿಸಲು ಸರಕಾರ ಬದ್ಧ ಎಂದವರು ಹೇಳಿದರು.
ಶಾಸಕ ಅಶೋಕ್ ರೈ ಮಾತನಾಡಿ, ಈವರೆಗೂ ಬಂಟ ಸಮುದಾಯವನ್ನು ಗುರುತಿಸುವ ಕಾರ್ಯ ಯಾವುದೇ ಸರಕಾರ ದಿಂದ ನಡೆದಿರಲಿಲ್ಲ. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರಕಾರ ಪ್ರಣಾಳಿಕೆಯ ಆಶ್ವಾಸನೆ ಯಂತೆ ಬಂಟ ನಿಗಮದ ಘೋಷಣೆಯಾಗಿದೆ. ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ ಮೊದಲಾದ ಗ್ಯಾರಂಟಿಗಳ ಮೂಲಕ ಮಹಿಳೆಯರ ಕೈ ಭದ್ರ ಪಡಿಸುವ ಕೆಲಸ ಆಗಿದೆ. ದ.ಕ. ಜಿಲ್ಲೆಗೆ 740 ಕೋಟಿ ರೂ. ಈ ಯೋಜನೆಗಳಿಂದ ಬರುತ್ತಿದೆ ಎಂದರು.
24 ಕೋಟಿ ರೂ. ವೆಚ್ಚದಲ್ಲಿ ಪಶು ವೈದ್ಯಕೀಯ ಕಾಲೇಜು ಮುಂದಿನ ವರ್ಷದಿಂದ ಕಾರ್ಯಾರಂಭಿಸಲಿದೆ. 70 ಕೋಟಿ ರೂ. ವೆಚ್ಚದಲ್ಲಿ ಕೆಎಂಎಫ್ ಎರಡನೇ ಘಟಕ ಸ್ಥಾಪಿಸುವ ಮೂಲಕ ಹೈನುಗಾರರಿಗೆ ಉತ್ತೇಜನ ದೊರೆಯಲಿದೆ. ಏನೂ ಮಾಡದೆ ಈಗ ಗ್ಯಾರಂಟಿಯಿಂದ ಅಭಿವೃದ್ಧಿಗೆ ತೊಂದರೆ ಎನ್ನಲು ಬಿಜೆಪಿಯವರಿಗೆ ಯಾವ ನೈತಿಕತೆಯೂ ಇಲ್ಲ ಎಂದು ಅವರು ಟೀಕಿಸಿದರು.
ಗೋಷ್ಟಿಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ್, ಮುಖಂಡರಾದ ಮಹಾಬಲ ಮಾರ್ಲ, ಶಾಹುಲ್ ಹಮೀದ್, ಸಂತೋಷ್ ಕುಮಾರ್, ಸುಭಾಷ್ ಕೊಳ್ನಾಡು, ಮುರಳೀಧರ್, ಸುದರ್ಶನ್ ಜೈನ್ ಉಪಸ್ಥಿತರಿದ್ದರು.
ಪುತ್ತೂರಿಗೆ ಇದೇ ಮೊದಲು 1010 ಕೋಟಿ ಅನುದಾನ
ಪುತ್ತೂರಿನ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ತಮ್ಮ ಅವಧಿಯಲ್ಲಿ 1010 ಕೋಟಿ ರೂ.ಗಳ ಅನುದಾನ ಅಭಿ ವೃದ್ಧಿ ಕಾರ್ಯಗಳಿಗೆ ಬಂದಿದ್ದು, ಟೆಂಡರ್ ಪ್ರಕ್ರಿಯೆನಡೆದು 18 ತಿಂಗಳಲ್ಲಿ ಕಾಮಗಾರಿ ಮುಗಿಸಲು ಸಿದ್ಧತೆ ನಡೆಸಲಾ ಗುತ್ತಿದೆ. ಹಿಂದಿನ ಐದು ವರ್ಷದಲ್ಲಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸ್ಥಾನಮಾನದ ಬಿಜೆಪಿ ಅಭ್ಯರ್ಥಿಗಳಿದ್ದರೂ ಒಂದು ರೂಪಾಯಿ ಅನುದಾನ ಬಿಡುಡೆಯಾಗಿಲ್ಲ ಎಂದು ಶಾಸಕ ಅಶೋಕ್ ರೈ ಆರೋಪಿಸಿದರು.
ಪಂಚ ರಾಜ್ಯ ಚುನಾವಣೆಯಲ್ಲೂ ಕರ್ನಾಟಕ ಮಾದರಿಯಂತೆ ಗ್ಯಾರಂಟಿ ಘೋಷಣೆ ಮಾಡಲಾಗುತ್ತಿದೆ. ಎಲ್ಲ ರಾಜ್ಯ ಗಳಲ್ಲೂ ಗ್ಯಾರಂಟಿ ಅನುಷ್ಠಾನ ಆಗಲು ಕರ್ನಾಟಕ ಮುನ್ನುಡಿ ಬರೆದಿದೆ. ಪ್ರಧಾನಿ ನರೇಂದ್ರ ಮೋದಿಯವರು ಉಚಿತ ಗಳಿಂದ ಅಭಿವೃದ್ಧಿಗೆ ಅಡ್ಡಿ ಎಂದು ಹೇಳಿದ್ದರು. ಆದರೆ ಬಿಜೆಪಿ ಆಡಳಿತದಲ್ಲಿರುವ ಮಧ್ಯ ಪ್ರದೇಶದಲ್ಲಿ ಬಿಜೆಪಿ ಗ್ಯಾರಂಟಿ ಘೋಷಿಸುತ್ತಿದೆ. ಇದರಿಂದ ಇದರಿಂದ ಅಭಿವೃದ್ಧಿ ಕುಂಠಿತ ಆಗುವುದಿಲ್ಲವೇ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಪ್ರಶ್ನಿಸಿದರು.