ಬೆಂಗಳೂರು, ಮೈಸೂರು ಹೆದ್ದಾರಿಗಳಲ್ಲಿ 'ಹಗಲು ದರೋಡೆ ಜಾಲ' ಸಕ್ರಿಯ !
ಸ್ವಂತಃ ಅನುಭವ ಹೇಳಿ ಜನರನ್ನು ಎಚ್ಚರಿಸಿದ ಲೇಖಕ ಜಿ.ಎನ್. ಅಶೋಕವರ್ಧನ
ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಾರ್ಯಾಚರಿಸುತ್ತಿರುವ ವಂಚನೆ ಜಾಲದ ಬಗ್ಗೆ ಲೇಖಕ, ಮಂಗಳೂರಿನ ಜಿ.ಎನ್. ಅಶೋಕವರ್ಧನ ಅವರು ಜನರ ಗಮನ ಸೆಳೆದಿದ್ದಾರೆ. ಅಶೋಕ ವರ್ಧನ ಅವರು ತಮ್ಮ ಅನುಭವ ಹೇಳಿಕೊಳ್ಳುತ್ತಿದ್ದಂತೆ ಇದೇ ರೀತಿಯ ವಂಚನೆ ನಮಗೂ ಆಗಿದೆ ಎಂದು ಇನ್ನೂ ಕೆಲವರು ಹೇಳಿಕೊಂಡಿದ್ದಾರೆ.
ವಾಹನಗಳಲ್ಲಿ ಹೋಗುತ್ತಿರುವ ಕುಟುಂಬಸ್ಥರನ್ನು ಗುರಿ ಮಾಡುವ ಈ ತಂಡ ದ್ವಿಚಕ್ರ ವಾಹನದಲ್ಲಿ ಬಂದು ಮೊದಲು "ನಿಮ್ಮ ವಾಹನದಲ್ಲಿ ಏನೋ ಸಮಸ್ಯೆ ಕಾಣುತ್ತಿದೆ, ನಿಲ್ಲಿಸಿ" ಎಂದು ಕೈಸನ್ನೆ ಮಾಡುತ್ತಾರೆ. ಆಗ ಹೆದರಿ ತಕ್ಷಣ ಪ್ರಯಾಣಿಕರು ಕಾರು ನಿಲ್ಲಿಸಿದರೆ ಬಂದು ಇಲ್ಲದ ಸಮಸ್ಯೆಯನ್ನು ಅವರೇ ಸೃಷ್ಟಿಸಿ ಆಮೇಲೆ ಅದನ್ನು ರಿಪೇರಿ ಮಾಡಿದ ಹಾಗೆ ನಟಿಸಿ ಸಾವಿರಾರು ರೂಪಾಯಿ ಹಣ ಪೀಕಿಸುತ್ತಾರೆ. ಕೇಳಿದಷ್ಟು ಹಣ ಕೊಡದೇ ಇದ್ದರೆ ಬಿಡೋದಿಲ್ಲ. ರಾತ್ರಿ ವೇಳೆಯಾದರೆ ಇಂತಹ ಸಂದರ್ಭಗಳಲ್ಲಿ ಬೇರೆ ಸಮಸ್ಯೆಗಳೂ ಆಗುವ ಅಪಾಯವಿದೆ.
ಘಟನೆಯ ವಿವರ:-
ಸೆಪ್ಟೆಂಬರ್, 4, 2024ರಂದು ರಾಷ್ಟೀಯ ಹೆದ್ದಾರಿ ಸಂಖ್ಯೆ-75 ರಲ್ಲಿ ಚನ್ನರಾಯಪಟ್ಟಣದಿಂದ ಬೆಂಗಳೂರಿನತ್ತ ಕಾರ್ ನಲ್ಲಿ ಪತ್ನಿ ಜೊತೆ ಪ್ರಯಾಣಿಸುತ್ತಿದ್ದ ಅಶೋಕ ವರ್ಧನ ಅವರಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಸಮೀಪ ಬಂದು "ಕಾರ್ ನಲ್ಲಿ ಏನೋ ಸಮಸ್ಯೆ ಇದೆ ಎಂದು ಒಮ್ಮೆ, ಹಾಗು ಏನೋ ಉರೀತಾ ಇದೆ" ಇನ್ನೊಮ್ಮೆ ಕೈಸನ್ನೆ ಮೂಲಕ ತೋರಿಸುತ್ತಾರೆ. ದ್ವಿಚಕ್ರ ಸವಾರರ ಕಾಳಜಿ ಕಂಡ ಇವರು ತಮ್ಮ ವಾಹನವನ್ನು ನಿಲ್ಲಿಸಿ ನೋಡಿದಾಗ ಅವರು ಹೇಳಿದಂತಹ ಯಾವುದೇ ಸಮಸ್ಯೆ ವಾಹನದಲ್ಲಿ ಕಂಡು ಬರಲಿಲ್ಲ. ಆದರೆ ದ್ವಿಚಕ್ರ ವಾಹನ ಸವಾರರು ಮಾತ್ರ "ಸಮಸ್ಯೆ ಇದೆ, ನೀವು ಕಾರಿನ ಬಾನೆಟ್ ಎತ್ತಿ" ಎಂದು ಹಠಕ್ಕೆ ಬಿದ್ದವರ ಹಾಗೆ ವರ್ತಿಸತೊಡಗಿದರು. ಇದರಿಂದ ಸಂದೇಹಗೊಂಡು ಅವರು ತಕ್ಷಣ ಕಾರು ಏರಿ ಅಲ್ಲಿಂದ ನಿರ್ಗಮಿಸುತ್ತಾರೆ. ಈ ವಿಷಯವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದಾಗ ಇದೇ ರೀತಿ ಘಟನೆ ನಡೆದಿರುವ ಕುರಿತು ಇತರ ಇಬ್ಬರೂ ತಮ್ಮ ಅನುಭವ ತಿಳಿಸಿದ್ದಾರೆ.
ಘಟನೆ -1
ಸುಳ್ಯದ ಕೃಷಿಕ ಕೃಷ್ಣ ಕುಮಾರ ಪೈಲೂರು ಅವರು ಮಂಡ್ಯದ ಮದ್ದೂರಿನ ಆಸುಪಾಸಿನ ಸಮೀಪದಲ್ಲಿ ತಮಗಾದ ಇದೇ ರೀತಿಯ ಅನುಭವವನ್ನು ಹಂಚಿಕೊಂಡಿದ್ದಾರೆ. ಕಾರ್ ನಲ್ಲಿ ಬೆಂಕಿ ಕಾಣಿಸುತ್ತಿದೆ ಎಂದು ಅಪರಿಚಿತ ದ್ವಿಚಕ್ರ ಸವಾರರು ಕೈ ಸಹ್ನೆ ಮೂಲಕ ತೋರಿಸಿದಾಗ ಇವರು ವಾಹನ ನಿಲ್ಲಿಸುತ್ತಾರೆ. ಆಗಲೂ ಬಾನೆಟ್ ಎತ್ತುವಂತೆ ಹೇಳಿದ್ದಕ್ಕೆ ಬಾನೆಟ್ ಎತ್ತಿದಾಗ ಬಿಸಿ ಇಂಜಿನ್ ನ ಮೇಲೆ ಕರ್ಪೂರದಂತೆ ಕಂಡು ಬಂದ ರಾಸಾಯನಿಕವನ್ನು ಹಾಕಿ ತಾವೇ ಬೆಂಕಿಯನ್ನು ಸೃಷ್ಟಿಸಿದ್ದರು. ಆಮೇಲೆ ತಾವೇ ವಾಹನ ರಿಪೇರಿ ಮಾಡಿ ಸರಿ ಮಾಡಿದಂತೆ ಮಾಡಿ ಏಳು ಸಾವಿರ ರೂಪಾಯಿಯನ್ನು ತೆಗೆದುಕೊಂಡಿದ್ದಾರೆ. ಇನ್ನೂ ಜಾಸ್ತಿ ಹಣಕ್ಕೆ ಬೇಡಿಕೆ ಇಟ್ಟಾಗ ಊರವರ ಮಧ್ಯ ಪ್ರವೇಶದಿಂದಾಗಿ ದ್ವಿಚಕ್ರ ವಾಹನ ಸವಾರರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಘಟನೆ - 2
ಸೆಪ್ಟೆಂಬರ್ 18, 2024 ರಂದು ರಾಧಾಕೃಷ್ಣ ಖಂಡಿಗ ಎಂಬುವವರು ರಾಷ್ಟೀಯ ಹೆದ್ದಾರಿಯಲ್ಲಿ ನೆಲಮಂಗಲದಿಂದ ಚನ್ನರಾಯಪಟ್ಟಣಕ್ಕೆ ರಾತ್ರಿ ಸಮಯ ಪ್ರಯಾಣಿಸುತ್ತಿದ್ದಾಗ ಇಬ್ಬರು ಬೈಕ್ ಸವಾರರು ಇದೇ ರೀತಿ ನಿಲ್ಲಿಸಿ ವಾಹನ ಹಾಳಾಗಿದೆ ಎಂದೆಲ್ಲ ಸನ್ನಿವೇಶ ಸೃಷ್ಟಿಸಿ ಅವರಿಂದ ಇಪ್ಪತ್ತೇಳು ಸಾವಿರ ವಸೂಲಿ ಮಾಡಿದ್ದಾರೆ.
ಇಂತಹ ಹಗಲು ದರೋಡೆ ನಡೆಯುತ್ತಿರುವುದು ಪೊಲೀಸರ ಗಮನಕ್ಕೂ ಬಂದಿದೆ. ಮೈಸೂರು - ಬೆಂಗಳೂರು ಹೆದ್ದಾರಿಯಲ್ಲಿ ಹೋಗುವಾಗ ವೇಗ ಪರಿಶೀಲನೆ ಮಾಡುತ್ತಿದ್ದ ಪೋಲಿಸ್ ಸಿಬ್ಬಂದಿಯೊಬ್ಬರು "ಈ ದಾರಿಯಲ್ಲಿ ಪೊಲೀಸ್ ಅಲ್ಲದೇ ಬೇರೆ ಯಾರಾದರೂ ಅಪಘಾತಕ್ಕೋ ಏನೋ ಸಂಕಟಕ್ಕೆ ಸಿಲುಕಿದಂತೆ ಮಾಡಿದರೆ ಖಂಡಿತಾ ನಿಲ್ಲಿಸಬೇಡಿ. ಮುಂದಿನ ಜನ ಸಂದಣಿ ಇರುವಲ್ಲಿ ನಿಲ್ಲಿಸಿ ನಮ್ಮ ನಂಬರ್ - 112ಕ್ಕೆ ಕರೆ ಮಾಡಿ" ಎಂದು ನನಗೆ ಹೇಳಿದರು ಇನ್ನೊಬ್ಬ ಪ್ರಯಾಣಿಕ ತಿಳಿಸಿದ್ದಾರೆ.
"ಇವು ಗಮನಕ್ಕೆ ಬಂದಿರುವ ಘಟನೆಗಳು. ಆದರೆ ನಮ್ಮ ಸಂಪರ್ಕಕ್ಕೆ ಬಾರದೇ ಇನ್ನೆಷ್ಟೋ ಮಂದಿ ಇದೇ ಮತ್ತು ಹೀಗೇ ವಂಚಕರ ಬಲೆಗೆ ಬಿದ್ದು ದುಡ್ಡು ಕಳಕೊಂಡಿರಬಹುದು, ಸಮಸ್ಯೆಗೆ ಸಿಲುಕಿರಬಹುದು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಏನು ಮಾಡುತ್ತಿದೆ ? ಪೊಲೀಸ್ ವ್ಯವಸ್ಥೆ ಏನು ಮಾಡುತ್ತಿದೆ ಎಂದು ಅಶೋಕ ವರ್ಧನ ಅವರು ಪ್ರಶ್ನಿಸಿದ್ದಾರೆ. ಹೆದ್ದಾರಿಯಲ್ಲಿ ಪ್ರಯಾಣಿಸುವವರು ಇಂತಹ ವಂಚಕರ ಬಗ್ಗೆ ಜಾಗರೂಕರಾಗಿರಬೇಕು ಎಂದು ಅವರು ಮನವಿ ಮಾಡಿದ್ದಾರೆ.