ಸಜಿಪನಡು: ಅಲ್ ಬಿರ್ರ್ ವಿದ್ಯಾಸಂಸ್ಥೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ
ಬಂಟ್ವಾಳ: ಕೇಂದ್ರ ಜುಮಾ ಮಸೀದಿ ಸಜೀಪನಡು ಇದರ ಆಶ್ರಯದಲ್ಲಿ ಅಲ್ ಬಿರ್ರ್ ವಿದ್ಯಾಸಂಸ್ಥೆಯ ನೂತನ ಕಟ್ಟಡ ಶಿಲಾನ್ಯಾಸ ಸಮಾರಂಭ ಸೋಮವಾರ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹಮದ್ ಮುಸ್ಲಿಯರ್ ನೇತೃತ್ವದಲ್ಲಿ ನೆರವೇರಿತು.
ಜಮಾಅತ್ ಆಡಳಿತ ಸಮಿತಿಯ ಅಧ್ಯಕ್ಷ ಹಾಜಿ ಎಸ್.ಅಬ್ದುಲ್ ರಝಾಕ್ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮವನ್ನು ಕೇಂದ್ರ ಜುಮಾ ಮಸೀದಿ ಖತೀಬ್ ಶಂಸುದ್ದೀನ್ ಆಶ್ರಫಿ ಉದ್ಘಾಟಿಸಿದರು. ತ್ವಾಖಾ ಮುಸ್ಲಿಯಾರ್, ಕರ್ನಾಟಕ ಸರ್ಕಾರದ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ಭಾರತ್ ಇನ್ಫ್ರಾಟೆಕ್ ಮಾಲಕ ಮುಹಮ್ಮದ್ ಮುಸ್ತಫಾ ಅವರನ್ನು ಜಮಾತ್ ಆಡಳಿತ ಸಮಿತಿಯ ಪರವಾಗಿ ಸನ್ಮಾನಿಸಲಾಯಿತು.
ಬಳಿಕ ಮಾತನಾಡಿದ ಯು.ಟಿ. ಖಾದರ್, ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಜಮಾತ್ ಆಡಳಿತ ಸಮಿತಿಯವರನ್ನು ಶ್ಲಾಘಿಸಿದರು. ಮುಸ್ತಫಾ ಮಾತನಾಡಿ, “ನನ್ನ ಹುಟ್ಟೂರಿಗೆ ಏನನ್ನಾದರೂ ಸೇವೆ ನೀಡಲು ಬಯಸಿದ್ದೆ. ಅಲ್ಲಾಹನ ಅನುಗ್ರಹದಿಂದ ಈ ಸಮುಚ್ಚಯವನ್ನು ನಿರ್ಮಿಸಿ ಕೊಡುವುದಕ್ಕೆ ಅವಕಾಶ ಲಭಿಸಿರುವುದರಲ್ಲಿ ಅಭಿಮಾನವಿದೆ. ಮುಂದಿನ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಸಂಪೂರ್ಣಗೊಳಿಸಿ ಕೊಡುವೆ" ಎಂದರು.
ವೇದಿಕೆಯಲ್ಲಿ ಶೇಕ್ ಅಬ್ದುಲ್ಲಾ ಉಸ್ತಾದ್, ಜಮಾತ್ ಪ್ರಧಾನ ಕಾರ್ಯದರ್ಶಿ ಎಸ್ ಕೆ ಮುಹಮ್ಮದ್, ಜಮಾಅತ್ ಉಪಾಧ್ಯಕ್ಷರಾದ ಹಾಜಿ ಅಬ್ದುಲ್ ರಝಾಕ್ ಚೇರ್ಮೆನ್, ಗುತ್ತಿಗೆದಾರ ಟಿ ಆರ್ ಖಾದರ್ ಹಾಜಿ, ಸಜೀಪ ಗ್ರಾಮ ಪಂಚಾಯತ್ ಅಧ್ಯಕ್ಷ ಎಸ್ಎನ್ ಇಕ್ಬಾಲ್, ಖಾದರ್ ಮಾಸ್ಟರ್ ಬಂಟ್ವಾಳ, ಅಲ್ ಬಿರ್ರ್ ಸಂಘಟಕರಾದ ಶುಕುರ್ ದಾರಿಮಿ, ಮುಹಿಯುದ್ದೀನ್ ಜುಮಾ ಮಸ್ಜಿದ್ ತುಂಬೆ ಖತೀಬ್ ಅಲ್ಹಾಜ್ ಅಬುಸ್ವಾಲಿಹ್ ಫೈಝಿ , ಶರೀಅತ್ ಕಾಲೇಜ್ ಪ್ರಾಂಶುಪಾಲ ರಶೀದ್ ಹನೀಫಿ, ಪ್ರೊಫೆಸರ್ ಶೇಕ್ ಮುಹಮ್ಮದ್ ಇರ್ಫಾನಿ, ಸ್ಥಳೀಯ ಇಮಾಮ್ ಉಸ್ತಾದ್ ಅಲ್ಹಾಜ್ ಅಬ್ದುಲ್ ಲತೀಫ್ ನಿಝಾಮಿ, ಸದರ್ ಉಸ್ತಾದ್ ಅನ್ಸಾರ್ ಅಝಅರಿ ಇನ್ನಿತರರು ಉಪಸ್ಥಿತರಿದ್ದರು.
ಜಮಾಅತ್ ಸಮಿತಿಯ ಕೋಶಾಧಿಕಾರಿ ಆಸಿಫ್ ಕುನೀಲ್ ಸ್ವಾಗತಿಸಿ, ಜಮಾತ್ ಸಮಿತಿಯ ಸದಸ್ಯ ಮುಹಮ್ಮದ್ ನಾಸಿರ್ ಸಜೀಪ ಹಾಗೂ ಅಬ್ದುಲ್ ಜಸೀಮ್ ಸಜೀಪ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.