ಮಂಗಳೂರು | ನಾಲ್ಕು ತಿಂಗಳಿಂದ ಸಿಗದ ವೇತನ: ಸರಕಾರಿ ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜು ಅರೆಕಾಲಿಕ ಉಪನ್ಯಾಸಕರ ಅಳಲು
ಮಂಗಳೂರು, ಜು. 18: ರಾಜ್ಯದ ಸರಕಾರಿ ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳ ಸುಮಾರು 1250 ಮಂದಿ ಅರೆಕಾಲಿಕ ಉಪನ್ಯಾಸಕರು ಕಳೆದ ಮಾರ್ಚ್‌ನಿಂದ ವೇತನವಿಲ್ಲದೆ ಅಸಹಾಯಕರಾಗಿರುವುದು ಮಾತ್ರವಲ್ಲದೆ, ಸೇವಾ ಅಭದ್ರತೆಯನ್ನು ಎದುರಿಸುತ್ತಿದ್ದಾರೆ.
ಈ ಬಗ್ಗೆ ಮಂಗಳವಾರ ಪ್ರೆಸ್‌ಕ್ಲಬ್‌ನಲ್ಲಿ ಅಳಲು ಹಂಚಿಕೊಂಡ ಅಖಿಲ ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರ ಸಂಘದ ಅಧ್ಯಕ್ಷ ಪ್ರಶಾಂತ್, ಈ ಉಪನ್ಯಾಸಕರಿಗೆ ವಾರಕ್ಕೆ 10 ಗಂಟೆ ಅಥವಾ ಕೆಲವೊಮ್ಮೆ 12ಗಂಟೆ ಪಾಠಕ್ಕೆ ತಿಂಗಳಿಗೆ ಕನಿಷ್ಠ 36 ಗಂಟೆ ಪಾಠ ಮಾಡಿದರೆ ಸಿಗುವುದು ಕೇವಲ 12,500 ರೂ.ಗಳು. ಅದು ಕೂಡಾ ಕಳೆದ ಮಾರ್ಚ್‌ನಿಂದ ಪಾವತಿಯಾಗಿಲ್ಲ ಎಂದರು.
ರಾಜ್ಯದ 89 ಸರಕಾರಿ ಪಾಲಿಟೆಕ್ನಿಕ್ ಹಾಗೂ 13 ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಟ್ಟು ಸುಮಾರು 1250 ಅರೆಕಾಲಿಕ ಉಪನ್ಯಾಸಕರು ಖಾಯಂ ಹುದ್ದೆಯಲ್ಲಿ ಬೋಧನಾ ಮಾಡುವ ಉಪನ್ಯಾಸಕರ ಕಾರ್ಯಭಾರವನ್ನೂ ಹೊರುವ ಪರಿಸ್ಥಿತಿ ಇದೆ. ಕಳೆದ 14 ವರ್ಷಗಳಲ್ಲಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರಿಗೆ ಮೂರು ಬಾರಿ ಸಂಬಳ ಮುಂಬಡ್ತಿ ದೊರಕಿದ್ದರೆ, ತಾಂತ್ರಿಕ ಶಿಕ್ಷಣ ಇಲಾಖೆಯ ಅತಿಥಿ ಉಪನ್ಯಾಸಕರಿಗೆ ಒಂದು ಬಾರಿ ಮಾತ್ರ ಮುಂಬಡ್ತಿ ನೀಡಲಾಗಿದೆ ಎಂದು ಅವರು ಆಕ್ಷೇಪಿಸಿದರು.
ಮಾಸಿಕ ವೇತನ 25,000 ರೂ., ಸೇವಾ ಭದ್ರತೆ, ಪಿಎಫ್, ಇಎಸ್‌ಐ, ರಜಾ ಸೌಲಭ್ಯ, ಹೆರಿಗೆ ರಜಾ ಸೌಲಭ್ಯ, ಉನ್ನತ ಶಿಕ್ಷಣ ಪಡೆಯಲು ರಜೆ ಮತ್ತು ವೇತನ ಸೌಲಭ್ಯ, ಐಡಿ ಕಾರ್ಡ್, ಸೇವಾ ಪ್ರಮಾಣ ಪತ್ರ ಸೌಲಭ್ಯಗಳನ್ನು ತಮಗೆ ಒದಗಿಸಬೇಕು. ಈ ಬಗ್ಗೆ ನೂತನ ಸರಕಾರದ ಸಚಿವರಿಗೆ ಮನವಿಯನ್ನು ಸಲ್ಲಿಸಲಾಗಿದ್ದು, ಬೇಡಿಕೆ ಈಡೇರಿಸುವ ಆಶಾಭಾವನೆ ಇರುವುದಾಗಿ ಹೇಳಿದರು.
ಗೋಷ್ಟಿಯಲ್ಲಿ ಅತಿಥಿ ಉಪನ್ಯಾಸಕರಾದ ವಿನಯ ಕುಮಾರ್, ಸಹನಾ, ಶಾಂತಾ, ಸಂಧ್ಯಾ, ನಯನಾ, ಮಮತಾ ಉಪಸ್ಥಿತರಿದ್ದರು.