ಪಾವೂರು ಉಳಿಯದಲ್ಲಿ ಮುಂದುವರಿದ ಮರಳುಗಾರಿಕೆ: ಆರೋಪ
ಸೆ.27ರಂದು ಕೆಥೋಲಿಕ್ ಸಭಾ ನೇತೃತ್ವದಲ್ಲಿ ಪಾದಯಾತ್ರೆ
ಮಂಗಳೂರು, ಸೆ.24: ಉಳ್ಳಾಲ ತಾಲೂಕಿನ ಪಾವೂರು ಉಳಿಯ ದ್ವೀಪದಲ್ಲಿ ಅಕ್ರಮ ಮರಳುಗಾರಿಕೆಯಿಂದ ಅಲ್ಲಿನ ನಿವಾಸಿಗಳಿಗೆ ಜೀವನ ನಡೆಸಲು ಅಸಾಧ್ಯವಾಗಿದ್ದು, ಇದನ್ನು ಖಂಡಿಸಿ ಸೆ. 27ರಂದು ಪಾದಯಾತ್ರೆಯನ್ನು ಹಮ್ಮಿಕೊಂಡಿರುವುದಾಗಿ ಕೆಥೋಲಿಕ್ ಸಭಾ ತಿಳಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಭಾದ ಅಧ್ಯಕ್ಷ ಆಲ್ವಿನ್ ಡಿಸೋಜಾ, ಪಾವೂರು ಉಳಿಯದಲ್ಲಿ ಅವ್ಯಾಹತವಾಗಿ ನಡೆದಿರುವ ಮರಳುಗಾರಿಕೆಯಿಂದ ದ್ವೀಪ ಪ್ರದೇಶವು 80 ಎಕರೆಯಿಂದ 40 ಎಕರೆಗೆ ಕಿರಿದಾಗಿದೆ. ಇಲ್ಲಿಯ ಜನರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದು, ಮನೆಗಳು ಅಪಾಯದಲ್ಲಿವೆ ಎಂದರು.
ಈಗಾಗಲೇ ಈಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳ ಪರವಾಗಿ ಅವರಿಗೆ ನ್ಯಾಯ ಕೊಡುವ ಉದ್ದೇಶದಿಂದ ಸೆ. 27ರಂದು ಸಂಜೆ 3ಕ್ಕೆ ಬಲ್ಮಠ ವೃತ್ತದಿಂದ ಜ್ಯೋತಿ, ಮಿಲಾಗ್ರಿಸ್ ಮೂಲಕ ಪಾದಯಾತ್ರೆ ನಡೆಸಿ ಮಿನಿ ವಿಧಾನ ಸೌಧದ ಎದುರು ಸಾರ್ವಜನಿಕ ಸಭೆ ನಡೆಸಲಾಗುವುದು. ಸಮಾನ ಮನಸ್ಕ ಜನರು ಆಂದೋಲನಕ್ಕೆ ಕೈ ಜೋಡಿಸಲಿದ್ದಾರೆ ಎಂದು ಅವರು ಹೇಳಿದರು.
ಗೋಷ್ಟಿಯಲ್ಲಿ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಯ್ ಕ್ಯಾಸ್ತಲಿನೋ, ಸಭಾದ ಮಾಜಿ ಅಧ್ಯಕ್ಷ ಪಾವ್ಲ್ ರೋಲ್ಫಿ ಡಿಕೋಸ್ತ, ನಿಕಟಪೂರ್ವ ಅಧ್ಯಕ್ಷ ಸ್ಟ್ಯಾನಿ ಲೋಬೋ, ಸ್ಥಳೀಯ ನಿವಾಸಿ ಗಿಲ್ಬರ್ಟ್ ಡಿಸೋಜಾ ಉಪಸ್ಥಿತರಿದ್ದರು.