ಅಧಿಕಾರಿಗಳ ನಿರ್ಲಕ್ಷ್ಯದಿಂದ ‘ಮರಳು’ ಸಮಸ್ಯೆ: ಸಿವಿಲ್ ಗುತ್ತಿಗೆದಾರರ ಆರೋಪ
10 ದಿನದೊಳಗೆ ಪರಿಹಾರ ಕಲ್ಪಿಸದಿದ್ದರೆ ಪ್ರತಿಭಟನೆ
ಸಾಂದರ್ಭಿಕ ಚಿತ್ರ
ಮಂಗಳೂರು,ಅ.26: ದ.ಕ.ಜಿಲ್ಲೆಯಲ್ಲಿ ಮರಳಿನ ಕೊರತೆಯಿಲ್ಲ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಮರಳಿನ ಸಮಸ್ಯೆ ಸೃಷ್ಟಿಯಾಗಿದೆ ಎಂದು ಆಪಾದಿಸಿರುವ ಸಿವಿಲ್ ಕಾಂಟ್ರಾಕ್ಟರ್ಸ್ ಅಸೋಸಿಯೇಶನ್ನ ದ.ಕ.ಜಿಲ್ಲಾ ಸಮಿತಿಯು ಇನ್ನು 10 ದಿನದೊಳಗೆ ಈ ಸಮಸ್ಯೆಗೆ ಪರಿಹಾರ ಕಲ್ಪಿಸದಿದ್ದರೆ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಸಿದೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಶನ್ನ ಅಧ್ಯಕ್ಷ ಮಹಾಬಲ ಕೊಟ್ಟಾರಿ, ಕೆಲವು ವರ್ಷಗಳ ಹಿಂದೆ ಕೇವಲ 800 ರೂ.ಗೆ ಮರಳು ಸಿಗುತ್ತಿತ್ತು. ಇಂದು ಅದರ ಬೆಲೆ 21 ಸಾವಿರಕ್ಕೇರಿದೆ. ಇದರಿಂದ ಬಡ, ಮಧ್ಯಮ ವರ್ಗದ ಜನರು ಮನೆ, ಕಟ್ಟಡಗಳನ್ನು ನಿರ್ಮಿಸಲಾಗದ ಸ್ಥಿತಿಯಲ್ಲಿದ್ದಾರೆ. ಮರಳಿನ ಅಭಾವದಿಂದಾಗಿ ಯಾವುದೇ ನಿರ್ಮಾಣ ಕಾಮಗಾರಿ ನಡೆಯುತ್ತಿಲ್ಲ. ಇದರಿಂದ ಕೂಲಿ ಕಾರ್ಮಿಕರು, ಗಾರೆ ಕೆಲಸಗಾರರು, ಮರದ ಕೆಲಸ ಗಾರರು, ಕಬ್ಬಿಣದ ಕೆಲಸಗಾರರು, ಪೈಂಟರ್ಗಳು, ಇಂಜಿನಿಯರ್ಗಳು, ಸೈಟ್ ಸೂಪರ್ವೈಸರ್ಗಳು ಮತ್ತವರ ಕುಟುಂಬದ ಸದಸ್ಯರು ಉಪವಾಸ ಬೀಳುವ ಸ್ಥಿತಿ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮರಳಿನ ಸಮಸ್ಯೆಯ ಬಗ್ಗೆ ಮುಖ್ಯಮಂತ್ರಿ, ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದಾಗ ಸಂಬಂಧಪಟ್ಟ ಇಲಾಖೆಗೆ ಸೂಕ್ತ ಕ್ರಮಕ್ಕೆ ನಿರ್ದೇಶನ ನೀಡಿದ್ದರು. ಆದರೆ, ಜಿಲ್ಲಾಧಿಕಾರಿ, ಗಣಿ ಇಲಾಖೆಯ ಅಧಿಕಾರಿಗಳು ಮುಖ್ಯಮಂತ್ರಿ, ಸಚಿವರ ನಿರ್ದೇಶನವನ್ನು ಪಾಲಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಮರಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗು ತ್ತದೆ. ಇದರ ನೇರ ಪರಿಣಾಮ ಸರಕಾರದ ರಾಯಧನದ ಮೇಲಾಗುತ್ತಿವೆ ಎಂದ ಮಹಾಬಲ ಕೊಟ್ಟಾರಿ ಆಪಾದಿಸಿದರು.
ಈ ವರ್ಷದ ಜೂನ್ನಲ್ಲಿ ಜಿಲ್ಲಾಧಿಕಾರಿ ಮತ್ತು ಗಣಿ ಇಲಾಖೆಯ ಅಧಿಕಾರಿಯನ್ನು ಭೇಟಿ ಮಾಡಿದಾಗ ಸಿಆರ್ಝೆಡ್ ವಲಯ ದಲ್ಲಿ ಬೆಥಮೆಟ್ರಿಕ್ ಸರ್ವೆ ಪೂರ್ಣಗೊಂಡಿದೆ. ಮರಳು ಸಮಿತಿಯ ಒಪ್ಪಿಗೆ ಮತ್ತು ಸರಕಾರದ ಅನುಮೋದನೆ ಪಡೆದು ಆಗಸ್ಟ್ನಲ್ಲಿ ಮರಳು ಪೂರೈಕೆ ಮಾಡುವುದಾಗಿ ತಿಳಿಸಲಾಗಿತ್ತು. ಅದಲ್ಲದೆ ನಾನ್ ಸಿಆರ್ಝೆಡ್ ವಲಯದಲ್ಲೂ ಮರಳು ಗಾರಿಕೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಬಿಡ್ಡ್ದಾರರು ವೇಯಿಂಗ್ ಬ್ರಿಡ್ಜ್ ನಿರ್ಮಿಸದ ಕಾರಣ ಮರಳುಗಾರಿಕೆಗೆ ಗಣಿ ಇಲಾಖೆಯು ಅನುಮತಿ ನೀಡುತ್ತಿಲ್ಲ ಎಂದು ಮಹಾಬಲ ಕೊಟ್ಟಾರಿ ಹೇಳಿದರು.
ಜಿಲ್ಲೆಯ ಎಂ. ಸ್ಯಾಂಡ್ನ ಗುಣಮಟ್ಟ ಚೆನ್ನಾಗಿಲ್ಲದ ಕಾರಣ ಮತ್ತು ಕಟ್ಟಡಗಳ ಮಾಲಕರು ಕೂಡ ಎಂ.ಸ್ಯಾಂಡ್ ಬಳಕೆ ಮಾಡಲು ಹಿಂಜರಿಯುತ್ತಿರುವುದರಿಂದ ಕಟ್ಟಡ ನಿರ್ಮಾಣ ಉದ್ಯಮವು ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಹಾಗಾಗಿ ಸರಕಾರ ಆದಷ್ಟು ಬೇಗ ಮರಳು ಸಮಸ್ಯೆಯನ್ನು ಬಗೆಹರಿಸಬೇಕು. ಕಟ್ಟಡ ಮತ್ತಿತರ ನಿರ್ಮಾಣ ಉದ್ಯಮವನ್ನು ರಕ್ಷಿಸಬೇಕು ಎಂದು ಮಹಾಬಲ ಕೊಟ್ಟಾರಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಶನ್ನ ಪದಾಧಿಕಾರಿಗಳಾದ ದಿನಕರ್ ಸುವರ್ಣ, ದೇವಾನಂದ, ಕೆನರಾ ಬಿಲ್ಡರ್ ಅಸೋಸಿಯೇಶನ್ನ ಬಾಲಸುಬ್ರಹ್ಮಣ್ಯ, ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್ನ ವಿಜಯ ವಿಷ್ಣು ಮಯ್ಯ ಮತ್ತು ಏಕನಾಥ ದಂಡಕೇರಿ, ಕ್ರೆಡೈ ಅಧ್ಯಕ್ಷ ವಿನೋದ್ ಪಿಂಟೊ, ಸಿಮೆಂಟ್ ಅಸೋಸಿಯೇಶನ್ನ ಪುರುಷೋತ್ತಮ ಶೆಣೈ ಮತ್ತಿತರರು ಉಪಸ್ಥಿತರಿದ್ದರು.