ಸಂತೋಷ್ ನೋಟಗಾರ್ ಏಷ್ಯನ್ ವಿಕಿ ಸೋರ್ಸ್ ಸಮ್ಮೇಳನಕ್ಕೆ ಆಯ್ಕೆ

ಮಂಗಳೂರು, ಫೆ.12: ಸಂತ ಅಲೋಶಿಯಸ್ ಯುನಿವರ್ಸಿಟಿಯ ಕಂಪ್ಯೂಟರ್ ಅನಿಮೇಶನ್ ಮುಖ್ಯಸ್ಥರಾದ ಸಂತೋಷ್ ನೋಟಗಾರ್ ಅವರು ಇಂಡೋನೇಷಿಯಾದ ಬಾಲಿಯಲ್ಲಿ ಫೆ.14 ರಿಂದ ಫೆ.16 ರವರೆಗೆ ನಡೆಯುವ ವಿಕಿ ಸೋರ್ಸ್ ಸಮ್ಮೇಳನಕ್ಕೆ ಆಯ್ಕೆಯಾಗಿದ್ದಾರೆ.
ಪ್ರಸ್ತುತ ಅವರು ವಿಕಿಪೀಡಿಯ ಏಷ್ಯನ್ ಮಾಸಿಕದ ದಕ್ಷಿಣ ಏಷ್ಯಾದ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ನೇತೃತ್ವದಲ್ಲಿ ದಕ್ಷಿಣ ಏಷ್ಯಾದಲ್ಲಿ ಒಂದು ಸಾವಿರಕ್ಕೂ ಅಧಿಕ ವಿಕಿಪೀಡಿಯ ಆರ್ಟಿಕಲ್ ಗಳು ರಚನೆಯಾಗಿವೆ. ಇವರು ಅಲೋಶಿಯಸ್ ಯುನಿವರ್ಸಿಟಿಯ ವಿಕಿಪೀಡಿಯ ವಿದ್ಯಾರ್ಥಿಗಳ ಸಮೂಹದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಸಂತೋಷ್ ನೋಟಗಾರ್ ಅವರು 2023 ಮತ್ತು 2024 ರಲ್ಲಿ ಕನ್ನಡ ವಿಕಿಪೀಡಿಯ ಸಂಪಾದನೆ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಗಳಿಸಿರುತ್ತಾರೆ. ಈಗಾಗಲೇ ಅಂತರಾಷ್ಟ್ರೀಯ ಮಟ್ಟದ ಸಮ್ಮೇಳನಗಳಾದ ಟ್ರೈನ್ ದಿ ಟ್ರೈನರ್ ಮತ್ತು ವಿಕಿ ಟೆಕ್ನಾಲಜಿ ಸಮ್ಮಿಟ್ ನಲ್ಲಿ ಭಾಗವಹಿಸಿದ್ದಾರೆ. ಅಲ್ಲದೆ ವಕೀಲೌಸ್ ಮಂಗಳೂರು ಮತ್ತು ಮೂವ್ಮೆಂಟ್ ಚಾರ್ಟರ್ ಯೋಜನೆಗಳಿಗೆ ಸಂಯೋಜಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಅವರು ಕರ್ನಾಟಕದ ಸಾಹಿತ್ಯ ಮತ್ತು ಜಾನಪದ ಕಲೆಗಳನ್ನು ವಿಕಿಪೀಡಿಯ ಮೂಲಕ ಜಾಗತಿಕವಾಗಿ ಪ್ರದರ್ಶನ ಮಾಡಲು ಯೋಜನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.