ಅನುದಾನಿತ ಶಾಲೆಗಳನ್ನು ಉಳಿಸಿ: ಗಡಿನಾಡ ಉತ್ಸವದಲ್ಲಿ ಪ್ರಭಾಕರ ಜೋಶಿ
ತಲಪಾಡಿ: ಸರ್ಕಾರಿ ಶಾಲೆಗಳಲ್ಲಿ ಕನ್ನಡ ಅನುಷ್ಠಾನಕ್ಕೆ ಸಕಲ ಅನುಕೂಲತೆ ಒದಗಿಸುವುದು ಜೊತೆಗೆ ಮುಖ್ಯವಾಗಿ ಗಡಿಭಾಗದ ನೂರಾರು ಅನುದಾನಿತ ಶಾಲೆಗಳನ್ನು ಉಳಿಸುವುದು ಆಗಬೇಕಿದೆ. ಕರ್ನಾಟಕ ಸರಕಾರ ಮತ್ತು ಕೇರಳ ಸರಕಾರಗಳು ಈ ಕಡೆಗೆ ಗಮನ ಹರಿಸಬೇಕು ಎಂದು ವಿದ್ವಾಂಸ ಡಾ. ಎಂ ಪ್ರಭಾಕರ ಜೋಶಿ ಹೇಳಿದರು.
ಅವರು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ತಲಪಾಡಿಯ ವಿಶ್ವಾಸ್ ಸಭಾಂಗಣದಲ್ಲಿ ನಡೆದ ಗಡಿನಾಡ ಕನ್ನಡ ಉತ್ಸವದಲ್ಲಿ ಆಶಯ ಭಾಷಣ ಮಾಡಿದರು.
ಕರಾವಳಿಯಲ್ಲಿ ಬಹುಭಾಷಿಕತೆಯ ಪ್ರಾಚೀನ ಮಾದರಿಯಿದ್ದು ಅದು ಉಂಟು ಮಾಡಿದ ವಿಶಾಲ ಮನೋಭಾವ ಇಲ್ಲಿನ ಜನರಲ್ಲಿದೆ.ನಾವು ಹಿಂದಿಯನ್ನೂ ಕಲಿಯಬಲ್ಲೆವು. ಹಾಗೆಯೇ ಉತ್ತರದವರು ದ್ರಾವಿಡ ಭಾಷೆಯನ್ನೂ ಕಲಿಯಲಿ ಎಂದರು.
ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ವಹಿಸಿದ ದಕ ಜಿಲ್ಲಾ ಕಸಾಪದ ಅಧ್ಯಕ್ಷರಾಗಿರುವ ಡಾ ಎಂ ಪಿ ಶ್ರೀನಾಥ್ ಕಾಸರ ಗೋಡಿನ ಕನ್ನಡಿಗರು ಎಂದಿಗೂ ಹೊರಗಿನವರಲ್ಲ. ನಾವು ಮನಸಿನಿಂದ ಎಲ್ಲರೂ ಕನ್ನಡಿಗರು. ಜಾಸರಗೋಡು ಕನ್ನಡಿಗರೊಂದಿಗೆ ಇಡೀ ಕರ್ನಾಟಕವಿದೆ ಎಂದು ಹೇಳಿದರು.
ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ ಕೆ ಎಂ ಅಶ್ರಫ್ ಭಾಗವಹಿಸಿ ನಾನು ಕೇರಳ ವಿಧಾನಸಭೆಯ ಕನ್ನಡ ಶಾಸಕ. ಕನ್ನಡದ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದರು.
ಕಸಾಪದ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಸಮಾರಂಭವನ್ನು ಉದ್ಘಾಟಿಸಿದರು. ಮಂಜೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷರಾಗಿರುವ ಜೀನ್ ಲವೀನಾ ಮೊಂತೇರೊ , ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿರುವ ಟಿ ಇಸ್ಮಾಯಿಲ್, ಮಂಗಳೂರು ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿರುವ ರಾಜೇಶ್ ಜಿ, ಉದ್ಯಾವರ ಸಾವಿರ ಜಮಾಹತ್ ನ ಅಧ್ಯಕ್ಷರಾಗಿರುವ ಸಯ್ಯದ್ ಯು ಕೆ ಸೈಫುಲ್ಲ ತಂಙಳ್ , ತಲಪಾಡಿ ಶ್ರೀ ದೇವಿಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾಗಿರುವ ಗಣೇಶ್ ಭಟ್, ಗಡಿನಾಡ ಕನ್ನಡ ಉತ್ಸವ ಸಮಿತಿಯ ಗೌರವಾಧ್ಯಕ್ಷರಾಗಿರುವ ಅರಿಬೈಲು ಗೋಪಾಲ ಶೆಟ್ಟಿ, ಕಸಾಪ ದ.ಕ ಜಿಲ್ಕಾ ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಇವರು ಅತಿಥಿಗಳ ನೆಲೆಯಿಂದ ಮಾತುಗಳನ್ನಾಡಿದರು.
ಗಡಿನಾಡ ಉತ್ಸವ ಸಮಿತಿಯ ಅಧ್ಯಕ್ಷರಾಗಿರುವ ರವೀಂದ್ರ ಶೆಟ್ಟಿ ಉಳಿದೊಟ್ಟು ಸ್ವಾಗತಿಸಿದರು. ದಕ ಜಿಲ್ಲಾ ಕಸಾಪದ ಗೌರವ ಕಾರ್ಯದರ್ಶಿಗಳಾಗಿರುವ ವಿನಯ ಆಚಾರ್ಯ ಎಚ್ ವಂದಿಸಿದರು. ಕಸಾಪ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ರಾಗಿರುವ ಡಾ ಧನಂಜಯ ಕುಂಬ್ಳೆ ಕಾರ್ಯಕ್ರಮವನ್ನು ನಿರೂಪಿಸಿದರು. ಅನನ್ಯಾ, ಶಿಲ್ಪಾ, ಪ್ರಜ್ಞಾ, ರಕ್ಷಿತಾ ಮಯ್ಯು ಪ್ರಾರ್ಥಿಸಿದರು.