ಬೆಳ್ತಂಗಡಿ: ಜೆಪಿಸಿ ವರದಿ ವಿರೋಧಿಸಿ SDPI ಪ್ರತಿಭಟನೆ

ಬೆಳ್ತಂಗಡಿ: ಕೇಂದ್ರ ಬಿಜೆಪಿ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಕ್ಫ್ ತಿದ್ದುಪಡಿ ಮಸೂದೆಯ ವರದಿಯನ್ನು ರಾಜ್ಯಸಭೆಯಲ್ಲಿ ಮಂಡಿಸಿದ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ವರದಿಯನ್ನು ವಿರೋಧಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಶುಕ್ರವಾರ ಬೆಳ್ತಂಗಡಿ ತಾಲೂಕಿನಾದ್ಯಂತ ಪ್ರತಿಭಟನೆ ನಡೆಸಿತು.
ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಪುಂಜಾಲಕಟ್ಟೆ, ಬಂಗೇರಕಟ್ಟೆ, ಕುದ್ರಡ್ಕ, ತೆಕ್ಕಾರು, ಮೂರುಗೋಳಿ, ಇಳಂತಿಲ, ಉಜಿರೆ, ಕಾಜೂರು, ಲಾಯಿಲ, ಕುಂಟಿನಿ, ಪುತ್ರಬೈಲು ನಲ್ಲಿ ಮಧ್ಯಾಹ್ನ ವಕ್ಫ್ ತಿದ್ದುಪಡಿ ಮಸೂದೆಯ ವರದಿಯನ್ನು ವಿರೋಧಿಸಿ ಕಾರ್ಯಕರ್ತರು ಬಿತ್ತಿಪತ್ರ ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಗುರುವಾಯನಕೆರೆ ಜಂಕ್ಷನ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆಯ ವರದಿಯನ್ನು ಬೆಂಕಿ ಹಾಕಿ ಸುಡುವ ಮೂಲಕ ಪ್ರತಿಭಟಿಸಲಾಯಿತು. ಉಜಿರೆ ವ್ಯಾಪ್ತಿಯ ಟಿ.ಬಿ ಕ್ರಾಸ್ ಜಂಕ್ಷನ್ ನಲ್ಲಿ ಪಂಜಿ ಹಿಡಿದು ಮಸೂದೆಯ ವರದಿಯನ್ನು ಬೆಂಕಿ ಹಾಕಿ ಸುಡುವ ಮೂಲಕ ಪ್ರತಿಭಟಿಸಲಾಯಿತು. ಕಕ್ಕಿಂಜೆಯಲ್ಲಿ ಮಸೂದೆಯ ವರದಿಯನ್ನು ಬೆಂಕಿ ಹಾಕಿ ಸುಡುವ ಮೂಲಕ ಪ್ರತಿಭಟಿಸಲಾಯಿತು.