‘ಸೆಪ್ಟಂಬರ್’ ಡ್ರಗ್ಸ್ ವಿರೋಧಿ ಮಾಸಾಚರಣೆ: ಬಿಷಪ್ ರೆ.ಫಾ. ಪೀಟರ್ ಪೌಲ್ ಸಲ್ಡಾನ ಘೋಷಣೆ
ಕ್ರೈಸ್ತ ಧರ್ಮ ಪ್ರಾಂತ್ಯದಿಂದ ಡ್ರಗ್ಸ್ ವಿರುದ್ಧ ಅಭಿಯಾನ
ಮಂಗಳೂರು: ಡ್ರಗ್ಸ್ ವಿರುದ್ಧದ ಅಭಿಯಾನದ ಅಂಗವಾಗಿ ಕ್ರೈಸ್ತ ಧರ್ಮ ಪ್ರಾಂತ್ಯವು ಸೆಪ್ಟಂಬರ್‌ನ್ನು ಡ್ರಗ್ಸ್ ವಿರೋಧಿ ಮಾಸವನ್ನಾಗಿ ಆಚರಿಸಲಿದೆ ಎಂದು ಮಂಗಳೂರು ಬಿಷಪ್ ರೆ.ಫಾ. ಪೀಟರ್ ಪೌಲ್ ಸಲ್ಡಾನ ಘೋಷಿಸಿದ್ದಾರೆ.
ಮಂಗಳೂರು ಬಜ್ಜೋಡಿಯ ಶಾಂತಿ ಕಿರಣದಲ್ಲಿ ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದಿಂದ ಮಾದಕ ದ್ರವ್ಯ ಮತ್ತು ಮಾದಕ ದ್ರವ್ಯ ಸೇವನೆ ಕುರಿತು ಆಯೋಜಿಸಲಾದ ವಿಚಾರ ಸಂಕಿರಣದಲ್ಲಿ ಅವರು ಈ ಘೋಷಣೆ ಮಾಡಿದರು.
ಮಾಸಾಚರಣೆಯ ಅಂಗವಾಗಿ ತಿಂಗಳು ಪೂರ್ತಿ ಚರ್ಚ್‌ಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು, ಡ್ರಗ್ಸ್ ಮುಕ್ತ ಸುರಕ್ಷಿತ ಭವಿಷ್ಯದ ನಿರ್ಮಾಣಕ್ಕಾಗಿ ಸಮುದಾಯದ ಎಲ್ಲರೂ ಸಹಕಾರ ನೀಡಬೇಕು ಎಂದು ಕರೆ ನೀಡಿದರು.
ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಫಾರೆನ್ಸಿಕ್ ಮೆಡಿಕಲ್ ಎಕ್ಸಾಮಿನರ್ ಡಾ. ಕರೆನ್ ಕ್ಯಾಸ್ತಲಿನೊ ಅವರು, ಡ್ರಗ್ಸ್‌ನ ವಿವಿಧ ಬಗೆ, ಅದರ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು.
ಬಜಾಲ್ ಲಿಂಕ್ ಡಿ ಎಡಿಕ್ಷನ್ ಸೆಂಟರ್‌ನ ಲಿಡಿಯಾ ಲೋಬೋ, ಕೆಲರಾಯಿ ಚರ್ಚ್‌ನ ಡೆನ್ನಿಸ್ ಡಿಸೋಜಾ ಮೊದಲಾದವರು ಭಾಗವಹಿಸಿದ್ದರು.