ಶರಣ್ ಪಂಪ್ವೆಲ್ ವಿರುದ್ಧ ಪ್ರಕರಣ: ಬಿ ರಿಪೋರ್ಟ್‌ಗೆ ಒತ್ತಾಯಿಸಿ ವಿಎಚ್‌ಪಿ ಪ್ರತಿಭಟನೆ
ಮಂಗಳೂರು, ಮೇ 31: ವಿಶ್ವಹಿಂದು ಪರಿಷತ್ ಮುಖಂಡ ಶರಣ್ ಪಂಪುವೆಲ್ ಅವರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿರುವುದಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಬೇಕು ಎಂದು ವಿಎಚ್‌ಪಿ ಮುಖಂಡ ಜಗದೀಶ್ ಶೇಣವ ಒತ್ತಾಯಿಸಿದ್ದಾರೆ.
ರಸ್ತೆಯಲ್ಲಿ ನಮಾಝ್ ಮಾಡಿರುವುದನ್ನು ಪ್ರಶ್ನಿಸಿದ್ದ ಶರಣ್ ಪಂಪ್ವೆಲ್ ಮೇಲೆ ಕೇಸು ದಾಖಲಿಸಿರುವುದು, ನಮಾಝ್ ಮಾಡಿದವರ ಮೇಲೆ ಹಾಕಿದ ಕೇಸಿಗೆ ‘ಬಿ’ ರಿಪೋರ್ಟ್ ಹಾಕಿದ ಸರಕಾರದ ನಡೆಯನ್ನು ಖಂಡನೀಯ ಎಂದು ಆರೋಪಿಸಿ ಶುಕ್ರವಾರ ಮಲ್ಲಿಕಟ್ಟೆ ವೃತ್ತದ ಬಳಿ ವಿಎಚ್‌ಪಿ ಆಯೋಜಿಸಿದ್ದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಪ್ರಕರಣ ದಾಖಲಾಗಿ ಒಂದೇ ದಿನದಲ್ಲಿ ‘ಬಿ’ ರಿಪೋರ್ಟ್ ಹಾಕುವುದು, ಬೆಳ್ತಂಗಡಿ ಶಾಸಕರ ವಿರುದ್ಧ ಪ್ರಕರಣ ದಾಖಲಾಗಿ ಎರಡೇ ದಿನದಲ್ಲಿ ಚಾರ್ಜ್‌ಶೀಟ್ ಹಾಕುವುದು ರಾಷ್ಟ್ರದಲ್ಲೇ ನಮ್ಮ ಜಿಲ್ಲೆಯಲ್ಲಿ ಮೊದಲು. ಇಲ್ಲಿ ನ್ಯಾಯ ಕೇಳಿದವರಿಗೆ ಶಿಕ್ಷೆ, ತಪ್ಪು ಮಾಡಿದವರಿಗೆ ರಾಜ ಮರ್ಯಾದೆ ಎಂದು ಅವರು ಹೇಳಿದರು.
ಹಿಂದೂ ಸಮಾಜ ಒಟ್ಟಾಗಿದೆ. ಪೊಲೀಸ್ ಆಯುಕ್ತರು ಹಿಂದೂ ಸಂಘಟನೆಯ ಇತಿಹಾಸವನ್ನು ಅರಿತುಕೊಳ್ಳಬೇಕು. ಶರಣ್ ಪಂಪ್ವೆಲ್ ವಿರುದ್ಧ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿ ತಕ್ಷಣ ‘ಬಿ’ ರಿಪೋರ್ಟ್ ಸಲ್ಲಿಸಬೇಕು ಎಂದವರು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರೇಮಾನಂದ ಶೆಟ್ಟಿ, ಮನಪಾ ಸದಸ್ಯ ಕಿರಣ್ ಕುಮಾರ್ ಕೋಡಿಕಲ್, ಪೊಳಲಿ ಗಿರಿಪ್ರಕಾಶ್ ತಂತ್ರಿ, ಹಿಂದೂ ಸಂಘಟನೆ ಮುಖಂಡರಾದ ಶಿವಾನಂದ ಮೆಂಡನ್, ಪುನೀತ್ ಅತ್ತಾವರ, ರವಿ ಅಸೈಗೋಳಿ ಮೊದಲಾದವರು ಪಾಲ್ಗೊಂಡಿದ್ದರು.