ವಿಟ್ಲ| ಕೋಡಪದವು ಶಾಲೆಯಲ್ಲಿ ಶಿಕ್ಷಕರ ಕೊರತೆ: ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಪೋಷಕರು
ವಿಟ್ಲ: ಶಿಕ್ಷಕರ ಕೊರತೆ ಮತ್ತು ಶೈಕ್ಷಣಿಕ ಮಧ್ಯದಲ್ಲಿ ಶಿಕ್ಷಕರ ವರ್ಗಾವಣೆ ವಿರೋಧಿಸಿ ಶಾಲಾ ಮಕ್ಕಳು ತರಗತಿ ಬಹಿಷ್ಕಾರಿಸಿ ಪ್ರತಿಭಟನೆ ನಡೆಸಿದ ಘಟನೆ ವಿಟ್ಲ ಪಡ್ನೂರು ಗ್ರಾಮದ ಕೋಡಪದವು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿ ಶನಿವಾರ ನಡೆಯಿತು.
ಮಕ್ಕಳು ತರಗತಿ ಬಹಿಷ್ಕಾರಿಸಿ ಶಾಲೆಗೆ ಹಾಜರಾಗದೆ ಪ್ರತಿಭಟಿಸಿದ್ದು, ಪೋಷಕರು ಶಾಲೆಯ ಗೇಟಿಗೆ ಬೀಗ ಜಡಿದು ಈ ತಾರತಮ್ಯ ನೀತಿ ಹಾಗೂ ನಮ್ಮ ಬೇಡಿಕೆ ಈಡೇರುವವರೆಗೂ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲವೆಂದು ತಾಲೂಕು ಶಿಕ್ಷಣಾಧಿಕಾರಿ ಸ್ಥಳಕ್ಕೆ ಬರುವವರೆಗೂ ಸ್ಥಳದಿಂದ ಕದಲುವುದಿಲ್ಲವೆಂದು ಪ್ರತಿಭಟನೆ ನಡೆಸಿದ್ದಾರೆ.
ಈ ಸಂದರ್ಭ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್. ಮಹಮ್ಮದ್ ಬೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಮಾತನಾಡಿ ಮುಂದಿನ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಮೂಲಕ ಸೂಕ್ತ ಶಿಕ್ಷಕರ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.
ಎಸ್ ಡಿ ಎಂ ಸಿ ಸಮನ್ವಯ ವೇದಿಕೆ ಕರ್ನಾಟಕ ಇದರ ರಾಜ್ಯಾಧ್ಯಕ್ಷರಾದ ಮೊಯ್ದಿನ್ ಕುಟ್ಟಿ ಮಾತನಾಡಿ ಸರಕಾರಿ ಶಾಲೆ ಗಳು ಮುಚ್ಚುವ ಹಂತದಲ್ಲಿವೆ. ಶಿಕ್ಷಣ ಇಲಾಖೆಯು ಅವರ ಕೈಯಿಂದಲೇ ಸರಕಾರಿ ಶಾಲೆಗಳು ಮುಚ್ಚುವ ರೀತಿಯಲ್ಲಿ ಗುತ್ತಿಗೆ ಪಡೆದವರಂತೆ ವರ್ತಿಸುತ್ತಿದೆ. ಒಂದು ಶಾಲೆಯನ್ನು ಉಳಿಸಿ ಬೆಳೆಸುವಲ್ಲಿ ತನ್ನ ಶ್ರಮವನ್ನು ಹಾಕುವರಿಗೆ ಪೂರಕ ವಾಗಿ ಇಲಾಖೆಯು ಸ್ಪಂದಿಸದ ಕಾರಣ ಸರಕಾರಿ ಶಾಲೆಗಳು ಮುಚ್ಚಲು ಕಾರಣವಾಗುತ್ತಿದೆ ಎಂದರು.
ಎಸ್ ಡಿ ಎಂ ಸಿ ಅಧ್ಯಕ್ಷ ಉಮ್ಮರ್ ಫಾರೂಕ್ ಟೆಕ್ನಿಕ್ ಸಭೆಗೆ ಶಿಕ್ಷಕರ, ಕಟ್ಟಡ,ಇನ್ನಿತರ ಕೊರತೆಯ ಬಗ್ಗೆ ಪ್ರತಿಭಟನಾ ಸಭೆಗೆ ಮಾಹಿತಿ ನೀಡಿದರು. ಇಲಾಖಾಧಿಕಾರಿ ಬರುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದರು.
ಶಿಕ್ಷಣಾಧಿಕಾರಿ ಮಂಜುನಾಥನ್ ಎಮ್.ಜಿ, ಇಸಿಓ ಸುಜಾತಾ,ಸುಧಾ, ಸಿಆರ್‍ಪಿ ಬಿಂಧು ಬಿ.ಜೆ ಆಗಮಿಸಿ ಪೋಷಕರ ಅವಹಾಲು ಸ್ವೀಕರಿಸಿ, ಸೋಮವಾರದಂದು ಎರಡು ಅತಿಥಿ ಶಿಕ್ಷಕರನ್ನು ಒದಗಿಸುತ್ತವೆ ಎಂದು ಭರವಸೆ ನೀಡಿದ ನಂತರ ಸೋಮವಾರದಿಂದ ಎಂದಿನಂತೆ ತರಗತಿ ಆರಂಭಿಸಲಾಗುವುದೆಂದು ತೀರ್ಮಾನಿಸಿ ಪ್ರತಿಭಟನೆ ಕೊನೆಗೊಳಿಸಲಾಯಿತು.
ಶಾಲಾ ಹಿರಿಯ ವಿದ್ಯಾರ್ಥಿ ಅಬ್ದುಲ್ಲಾ ಹಾಜಿ ಕುಕ್ಕಿಲ, ಮಜಿ ರಾಮ್ ಭಟ್, ವಿಟ್ಲಪಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಂತ್ ಪೂರ್ಲಿಪ್ಪಾಡಿ, ಮಾಜಿ ಅಧ್ಯಕ್ಷರಾದ ರವೀಶ್ ಶೆಟ್ಟಿ ಕರ್ಕಳ,ರೇಷ್ಮಾ ಶಂಕರಿ ಬಲಿಪಗುಲಿ, ಉಪಾಧ್ಯಕ್ಷೆ ಪ್ರೇಮ ಮದಕ, ಗ್ರಾ.ಪಂಚಾಯಿತಿ ಸದಸ್ಯ ಹರ್ಷದ್ ಕುಕ್ಕಿಲ, ಹಳೆವಿದ್ಯಾರ್ಥಿ ಸಂಘದ ಹಸೈನಾರ್ ತಾಳಿತ್ತನೂಜಿ, ಪೋಷಕರು, ಹಳೆ ವಿದ್ಯಾರ್ಥಿಗಳು ಭಾಗವಹಸಿದ್ದರು.