ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ಗೆ ʼಶುಹದಾʼ ಎಕ್ಸಲೆನ್ಸ್ ಅವಾರ್ಡ್
ಯು.ಟಿ. ಖಾದರ್
ಪುತ್ತೂರು: ತಾಲೂಕಿನ ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ದಶಮಾನೋತ್ಸವದ ಅಂಗವಾಗಿ ಪ್ರದಾನಿಸಲಿರುವ “ಶುಹದಾ’’ ಎಕ್ಸಲೆನ್ಸ್ ಅವಾರ್ಡ್ ಗೆ ಕರ್ನಾಟಕ ವಿಧಾನಸಭಾಧ್ಯಕ್ಷರಾದ ಯು.ಟಿ. ಖಾದರ್ ಫರೀದ್ ಅವರು ಆಯ್ಕೆಯಾಗಿದ್ದಾರೆ.
ಮುಸ್ಲಿಂ ಸಮುದಾಯದ ಸಬಲೀಕರಣಕ್ಕಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆ, ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿಯಾಗಿ ಸರ್ವರಿಗೂ ಸರ್ವಸಮ್ಮತ ವ್ಯಕ್ತಿ, ಇತರ ಸಮುದಾಯದವರೂ ಗೌರವಿಸುವ ಹಾಗೂ ಒಪ್ಪಿಕೊಳ್ಳುವ ವ್ಯಕ್ತಿತ್ವ, ಮುಸ್ಲಿಂ ಸಮುದಾಯದೊಳಗೆ ಪ್ರಭಾವಬೀರಬಲ್ಲ ಹಾಗೂ ಇತರರಿಗೆ ಮಾದರೀಯೋಗ್ಯ, ಧಾರ್ಮಿಕ ಪ್ರಜ್ಞೆ - ಸೌಹಾರ್ದ ಮನೋಭಾವ, ರಾಷ್ಟ್ರೀಯ ಪ್ರಜ್ಞೆ, ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಆ. 19 ರಂದು ಮಧ್ಯಾಹ್ನ 2 ಗಂಟೆಗೆ ಮಾಡನ್ನೂರಿನಲ್ಲಿ ನಡೆಯುವ ನೂರುಲ್ ಹುದಾ ಸಂಸ್ಥೆಯ ದಶಮಾನೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಧಾರ್ಮಿಕ ವಿದ್ವಾಂಸರು ಹಾಗೂ ಸಚಿವರುಗಳ ಸಮ್ಮುಖದಲ್ಲಿ ಯು.ಟಿ. ಖಾದರ್ ಅವರಿಗೆ “ಶುಹದಾ” ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ಪ್ರಸ್ತುತ ಕಾರ್ಯಕ್ರಮದಲ್ಲಿ ಸಮಸ್ತ ಉಲಮಾ ಒಕ್ಕೂಟದ ಸೈಯ್ಯದ್ ಸಾದಿಖಲಿ ಶಿಹಾಬ್ ತಂಙಳ್, ಶೈಖುನಾ ಆಲಿಕುಟ್ಟಿ ಉಸ್ತಾದ್, ಯು.ಎಂ. ಅಬ್ದುಲ್ ರಹ್ಮಾನ್ ಮುಸ್ಲಿಯಾರ್, ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್, ಕೆ.ಎಸ್. ಅಲಿ ತಂಙಳ್ ಕುಂಬೋಳ್ ಸಹಿತ ಸಚಿವರುಗಳಾದ ಝಮೀರ್ ಅಹ್ಮದ್ ಖಾನ್, ರಹೀಂ ಖಾನ್, ದಿನೇಶ್ ಗುಂಡೂರಾವ್, ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ ಸಂಸದರು, ಶಾಸಕರು ಹಾಗೂ ಹಲವಾರು ಉಲಮಾ, ಉಮರಾ, ಸಾದಾತು ನೇತಾರರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.