ಮಳೆ, ಬಿಸಿಲಿಗೆ ನೆನೆಯುತ್ತಿದೆ ಮತ್ಸ್ಯ ವಾಹಿನಿ: ಸುಳ್ಯ ತಾ.ಪಂ. ಕಚೇರಿ ಬಳಿಯೇ ಇದೆ ಇನ್ನೂ 4 ವಾಹನಗಳು
ಸುಳ್ಯ: ಸ್ವಾವಲಂಬಿ ಬದುಕಿಗಾಗಿ ಸ್ವ ಉದ್ಯೋಗ ಕಾರ್ಯಕ್ರಮದಡಿ ಸುಳ್ಯದಲ್ಲಿ ಲೋಕಾರ್ಪಣೆಗೆ ತರಲಾಗಿದ್ದ 12 ಮತ್ಸ್ಯ ವಾಹಿನಿ ವಾಹನಗಳಲ್ಲಿ ಇನ್ನೂ 4 ವಾಹನಗಳು ಸುಳ್ಯದ ತಾಲೂಕು ಪಂಚಾಯತ್ ಕಚೇರಿ ಬಳಿ ಬಿಸಿಲು, ಮಳೆಗೆ ನೆನೆಯುತ್ತಿದೆ. ಸಂಬಂಧಿಸಿದವರ ನಿರ್ಲಕ್ಷ್ಯದಿಂದ ಸರಕಾರದ ಸೊತ್ತು ಹಾಳಾಗುವ ರೀತಿಯಲ್ಲಿದೆ.
ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸ್ವಾವಲಂಬಿ ಬದುಕಿಗಾಗಿ ಸ್ವ ಉದ್ಯೋಗ ಮನೆ ಬಾಗಿಲಿಗೆ ತಾಜಾ ಮೀನು ಸರಬರಾಜು ಮಾಡುವ ಮತ್ಸ್ಯ ವಾಹಿನಿ ತ್ರಿಚಕ್ರ ವಾಹನಗಳ ಲೋಕಾರ್ಪಣೆ ಕಾರ್ಯಕ್ರಮ ಕಳೆದ ಮಾ.26ರಂದು ಸುಳ್ಯದಲ್ಲಿ ನಡೆದಿತ್ತು. ಅಂದಿನ ಮೀನುಗಾರಿಕೆ ಸಚಿವ ಎಸ್.ಅಂಗಾರ ಅವರು ವಾಹನ ಲೋಕಾ ರ್ಪಣೆ ಮಾಡಿದ್ದರು. ಇದಕ್ಕಾಗಿ ಸುಳ್ಯಕ್ಕೆ ಮತ್ಸ್ಯ ವಾಹಿನಿ ವಾಹನಗಳನ್ನು ತರಲಾಗಿತ್ತು. ಲೋಕಾರ್ಪಣೆ ಬಳಿಕ ಅದನ್ನು ಸುಳ್ಯದ ತಾ.ಪಂ. ಕಚೇರಿ ಬಳಿ ನಿಲ್ಲಿಸಲಾಗಿತ್ತು.
ಸುಳ್ಯ ತಾ.ಪಂ. ಕಚೇರಿ ಬಳಿ ಲೋಕಾರ್ಪಣೆಗೆ ಸುಮಾರು 12 ಮತ್ಸ್ಯ ವಾಹಿನಿಯ ತ್ರಿಚಕ್ರ ವಾಹನಗಳನ್ನು ತರಲಾಗಿತ್ತು. ಈ ವಾಹನಗಳು ಅನಾಥ ಸ್ಥಿತಿಯಲ್ಲಿರುವ ಬಗ್ಗೆ ಮೇ 24ರಂದು ವರದಿ ಪ್ರಕಟಗೊಂಡಿತ್ತು. ವರದಿ ಪ್ರಕಟಗೊಂಡ ಬೆನ್ನಲ್ಲೇ ಸುಮಾರು ಎಂಟು ವಾಹನಗಳನ್ನು ಕೆಎಫ್‍ಡಿಸಿ ಯವರು ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಶೆಡ್‍ಗೆ ಕೊಂಡೊ ಯ್ದಿದ್ದರು. ಆದರೆ ನಾಲ್ಕು ವಾಹನಗಳು ಇನ್ನೂ ಸುಳ್ಯದಲ್ಲೇ ಬಾಕಿಯಾಗಿದೆ.
ಇದೀಗ ಈ ನಾಲ್ಕು ವಾಹನಗಳನ್ನು ನಿಲ್ಲಿಸಲಾದ ಸ್ಥಳದಲ್ಲಿ ಹುಲ್ಲು, ಗಿಡಗಳು ಬೆಳೆದು ವಾಹನಗಳು ಸುತ್ತುವರಿಸಲು ಆರಂಭಿಸಿದೆ. ಅಲ್ಲದೇ ಮಳೆಯ ನೀರು ವಾಹನದೊಳಗೆ ಹೋಗಿ ವಾಹನ ತುಕ್ಕು ಹಿಡಿಯುವ ಮುನ್ಸೂಚನೆ ಕಾಣುತ್ತಿದೆ. ಒಟ್ಟಿನಲ್ಲಿ ಬಿಸಿಲು, ಮಳೆಗೆ ವಾಹನಗಳು ಹಾನಿಗೊಳ್ಳುತ್ತಿರುವುದು ಕಂಡುಬಂದಿದೆ.
ಈ ವಾಹನದ ಗುತ್ತಿಗೆ ವಹಿಸಿಕೊಂಡಿದ್ದ ಖಾಸಗಿ ಸಂಸ್ಥೆ ಅವರು ಈ ವಾಹನವನ್ನು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮಕ್ಕೆ ಹಸ್ತಾಂತರ ಮಾಡಿಲ್ಲ ಎನ್ನುವುದು ಕೆಎಫ್‍ಡಿಸಿ ಸಂಸ್ಥೆಯವರು ಮಾಹಿತಿ. ಬೆಂಗಳೂರಿನಲ್ಲಿ ಇದರ ರಿಜಿಸ್ಟ್ರೇಶನ್ ಕೂಡ ಆಗಿಲ್ಲ ಎನ್ನಲಾಗಿದೆ, ಜತೆಗೆ ಅವರಿಗೆ ಪೂರ್ತಿ ಬಿಲ್ ಕೂಡ ಪಾವತಿಯಾಗಿಲ್ಲ ಎನ್ನಲಾಗಿದ್ದು, ಈ ಎಲ್ಲಾ ಕಾರಣ ಗಳಿಂದ ಈ ವಾಹನ ಇಲ್ಲೇ ಬಾಕಿಯಾಗಿದೆ ಎನ್ನುವುದು ಇನ್ನೊಂದು ಮಾಹಿತಿ. ಇದು ರಾಜ್ಯ ಹಾಗೂ ಕೇಂದ್ರ ಸರಕಾರದ ಅನುದಾನದ ಯೋಜನೆಯಾಗಿದ್ದು, ಒಟ್ಟು ಗೊಂದಲಗಳಿಂದ ಫಲಾನುಭವಿಗಳ ಕೈ ಸೇರಬೇಕಾದ ಹೊಸ ಮತ್ಸ್ಯ ವಾಹಿನಿ ವಾಹನಗಳು ಸುಳ್ಯದಲ್ಲಿ ಸೂಕ್ತ ರಕ್ಷಣೆ ಇಲ್ಲದೇ ಅನಾಥ ಸ್ಥಿತಿಯಲ್ಲಿರುವುದು ದುರಂತ ಸಂಗತಿ.
"ಮತ್ಸ್ಯ ವಾಹಿನಿ ವಾಹನ ಇನ್ನೂ ಕೆಎಫ್‍ಡಿಸಿಗೆ ಹಸ್ತಾಂತರ ಆಗಿಲ್ಲ. ಸುಳ್ಯದಲ್ಲಿದ್ದ 12 ವಾಹನಗಳಲ್ಲಿ 8 ವಾಹನಗಳನ್ನು ಮಂಗಳೂರು ಕಾಲೇಜಿನ ಶೆಡ್‍ನಲ್ಲಿ ತಂದಿರಿಸಲಾಗಿದೆ. ಬೆಂಗಳೂರಿನಲ್ಲಿ 150 ವಾಹನಗಳನ್ನು ಟ್ರಯಲ್ ಲಾಂಚ್ ಮಾಡಲು ತಿಳಿಸಲಾಗಿದೆ. ಆದ್ದರಿಂದ ಸುಳ್ಯದಲ್ಲಿರುವ ವಾಹನಗಳನ್ನು ಅಲ್ಲಿಂದ ಬೆಂಗಳೂರಿಗೆ ತೆಗೆದುಕೊಂಡು ಹೋಗಬಹುದು".
- ಕೆ.ಗಣೇಶ್
ವ್ಯವಸ್ಥಾಪಕ ನಿರ್ದೇಶಕರು, ಕೆಎಫ್‍ಡಿಸಿ