ಯೋಧರಿಗೆ, ಪೊಲೀಸರಿಗೆ ಹೆಚ್ಚಿನ ಸವಲತ್ತುಗಳನ್ನು ಒದಗಿಸಿಕೊಡಬೇಕಾಗಿದೆ: ರವೀಂದ್ರ ಜೋಶಿ
ಮಂಗಳೂರು : ದೇಶವನ್ನು ಕಾಯುವ ಯೋಧರು ಮತ್ತು ಸಮಾಜದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಕೆಲಸವನ್ನು ಮಾಡುವ ಪೊಲೀಸರಿಗೆ ಸರಕಾರ ಹೆಚ್ಚಿನ ಸವಲತ್ತುಗಳನ್ನು ನೀಡಬೇಕಾಗಿದೆ ಎಂದು ದ.ಕ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರವೀಂದ್ರ ಎಂ ಜೋಶಿ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮೀಷನರೇಟ್, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಮತ್ತು ಕೆಎಸ್‌ಆರ್‌ಪಿ ಮಂಗಳೂರು 7ನೇ ಘಟಕದ ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಚೇರಿಯ ಆವರಣದಲ್ಲಿ ಶನಿವಾರ ನಡೆದ ‘‘ಪೊಲೀಸ್ ಹುತಾತ್ಮರ ದಿನಾಚರಣೆ’’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಯೋಧರಿಗೆ ಮತ್ತು ಪೊಲೀಸರಿಗೆ ಕರ್ತವ್ಯದ ವೇಳೆ ತಮ್ಮ ಮನೆಯ ಕಡೆಗೆ ಹೆಚ್ಚು ಗಮನ ಕೊಡಲು ಸಾಧ್ಯವಾಗುವುದಿಲ್ಲ. ನಾನಾ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಕೆಲವು ಸಂದರ್ಭದಲ್ಲಿ ಪ್ರಾಣವನ್ನೇ ಕಳೆದುಕೊಳ್ಳಬೇಕಾಗುತ್ತದೆ. ದೇಶ ಮತ್ತು ಸಮಾಜದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡುವ ಯೋಧರು ಮತ್ತು ಪೊಲೀಸರ ಕುಟುಂಬಗಳಿಗೆ ನಾವು ಏನನ್ನು ಒದಗಿಸಿಕೊಟ್ಟಿದ್ದೇವೆ ಎನ್ನುವ ಬಗ್ಗೆ ನಾವು ಚಿಂತನೆ ನಡೆಸಬೇಕಾಗಿದೆ. ಅವರಿಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಒದಗಿಸಬೇಕಾಗಿದೆ ಎಂದರು.
ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಪೊಲೀಸ್ ಹುತಾತ್ಮರ ವಿವರ ನೀಡಿದರು.
ಪಶ್ಚಿಮ ವಲಯ ಪೊಲೀಸ್ ಉಪ ಮಹಾ ನಿರೀಕ್ಷಕ ಡಾ.ಚಂದ್ರ ಗುಪ್ತ, ಕೋಸ್ಟ್ ಗಾರ್ಡ್ ಡಿಐಜಿ ಪ್ರವೀಣ್ ಕುಮಾರ್ ಮಿಶ್ರಾ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ವಿ.ಕರಿಕಾಲನ್, ದ.ಕ. ಜಿಲ್ಲಾ ಎಸ್ಪಿ ಸಿ.ಬಿ. ರಿಷ್ಯಂತ್, ಮಂಗಳೂರು ಕೆಎಸ್‌ಆರ್‌ಪಿ ೭ನೇ ಘಟಕದ ಕಮಾಂಡೆಂಟ್ ಬಿ.ಎಂ.ಪ್ರಸಾದ್, ಡಿಸಿಪಿ ದಿನೇಶ್ ಕುಮಾರ್ ಬಿ.ಪಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರ್ಮಪ್ಪ ಎನ್, ಡಿವೈ ಸಿಎಫ್‌ಒ ಆ್ಯಂಟೋನಿ ಎಸ್ ಮರಿ ನಂಜಪ್ಪ, ಡಿಸಿಪಿಗಳಾದ ಉಮೇಶ್ ಪಿ, ಪರಮೇಶ್ವರ ಹೆಗಡೆ, ಡಿಸಿಆರ್‌ಬಿ ಡಿವೈಎಸ್ಪಿ ಡಾ. ಗಾನ ಪಿ. ಕುಮಾರ್ ಗೃಹ ರಕ್ಷಕ ದಳದ ಕಮಾಡೆಂಟ್ ಡಾ.ಮುರಳಿ ಮೋಹನ್ ಚೋಂತಾರು, ನಿವೃತ್ತ ಡಿವೈಎಸ್‌ಪಿ ವಿಶ್ವನಾಥ ಪಂಡಿತ್ ಉಪಸ್ಥಿತರಿದ್ದರು.