ಸೋಮೇಶ್ವರ: ರೇಬೀಸ್ ಸೋಂಕು ಶಂಕೆ; ಏಕಾಏಕಿ ಹಲವರ ಮೇಲೆ ದಾಂಧಲೆ ಮಾಡಿದ ಹಸು
ಉಳ್ಳಾಲ: ಹಸುವೊಂದು ಮನೆಯೊಂದರ ಆವರಣದೊಳಗೆ ನುಗ್ಗಿ ದಾಂಧಲೆ ನಡೆಸಿದಲ್ಲದೆ, ರಸ್ತೆಯಲ್ಲಿ ಹೋಗುತ್ತಿದ್ದ ಸ್ಕೂಟರ್, ಮಹಿಳೆ ಸೇರಿದಂತೆ ಅನೇಕರಿಗೆ ತಿವಿದು ಗಾಯಗೊಳಿಸಿರುವ ಘಟನೆ ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ನಡೆದಿದೆ.
ಸ್ಥಳೀಯರು ಹರಸಾಹಸ ಪಟ್ಟು ಹಸುವನ್ನು ಹಿಡಿದಿದ್ದು, ಪಶುವೈದ್ಯರು ಅರವಳಿಕೆ ನೀಡಿದ ಕೆಲವೇ ಹೊತ್ತಿನಲ್ಲಿ ಹಸು ಸತ್ತಿದ್ದು, ರೇಬೀಸ್ ನಿಂದ ಹಸು ಸಾವನ್ನಪ್ಪಿರುವುದಾಗಿ ಶಂಕಿಸಲಾಗಿದೆ.
ಸೋಮೇಶ್ವರ ದ್ವಾರದ ಬಳಿಯ ನಿವಾಸಿಯೋರ್ವರಿಗೆ ಸೇರಿದ ಈ ಹಸು ಮೇಯಲು ಬಿಟ್ಟಿದ್ದ ವೇಳೆ ಸಂಜೆ ಏಕಾಏಕಿ ಹುಚ್ಚೆದ್ದು ಅವಾಂತರ ಸೃಷ್ಟಿಸಿದೆ. ಈ ಹಸು ಕೊಲ್ಯ ಮೂಕಾಂಬಿಕ ದೇವಸ್ಥಾನದ ಬಳಿಗೆ ಸಾಗಿ ಸ್ಕೂಟರ್ ಒಂದಕ್ಕೆ ತಿವಿದಿದ್ದು, ಇತರರ ಮೇಲೂ ದಾಳಿ ನಡೆಸಿದೆ.
ಭಯಭೀತರಾದ ಸ್ಥಳೀಯರು ಸೋಮೇಶ್ವರ ಪುರಸಭಾ ಉಪಾಧ್ಯಕ್ಷ ರವಿಶಂಕರ್ ಅವರಲ್ಲಿ ವಿಚಾರ ತಿಳಿಸಿದ್ದಾರೆ. ರವಿಶಂಕರ್ ಅವರು ಸ್ಥಳೀಯರ ಜತೆ ಸೇರಿ ಹಗ್ಗದಿಂದ ಧಾಂದಲೆ ನಡೆಸುತ್ತಿದ್ದ ಹಸುವನ್ನು ಹಿಡಿದಿದ್ದಾರೆ. ವಿಚಾರ ಸ್ಥಳೀಯ ಶಾಸಕ ಯು.ಟಿ.ಖಾದರ್ ಅವರ ಗಮನಕ್ಕೂ ಬಂದಿದ್ದು, ಅವರು ಕೂಡಲೇ ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳ ತಂಡವನ್ನು ಕಳುಹಿಸಿದ್ದರು. ಸ್ಥಳೀಯರು ಹಿಡಿದ ಹಸುವಿಗೆ ಪಶು ವೈದ್ಯರು ಅರವಳಿಕೆ ಚುಚ್ಚು ಮದ್ದು ನೀಡಿದ್ದು ಕೆಲ ಹೊತ್ತಲ್ಲೇ ಹಸು ಸಾವನ್ನಪ್ಪಿದೆ.
ಹಸುವು ಬಹುತೇಕ ರೇಬೀಸ್ ನಿಂದಲೇ ದಾಂಧಲೆ ನಡೆಸಿರುವುದಾಗಿ ಕೋಟೆಕಾರು ಸರಕಾರಿ ಪಶು ಆಸ್ಪತ್ರೆಯ ಪಶು ವೈದ್ಯಾಧಿಕಾರಿ ಡಾ.ಗಜೇಂದ್ರ ಕುಮಾರ್ ಶಂಕೆ ವ್ಯಕ್ತಪಡಿಸಿದ್ದಾರೆ.