ಸೋಮೇಶ್ವರ ಪುರಸಭೆಯ ಕಂದಾಯ ಅಧಿಕಾರಿ, ಸಿಬ್ಬಂದಿಗೆ ಬ್ಲ್ಯಾಕ್ಮೇಲ್ ಪ್ರಕರಣ: ಆರೋಪಿ ಧನಂಜಯ ರೆಡ್ಡಿ ಸೆರೆ
ಧನಂಜಯ ರೆಡ್ಡಿ ತೋಟಾ
ಮಂಗಳೂರು, ಡಿ.22: ಲೋಕಾಯುಕ್ತ ಸೋಗಿನಲ್ಲಿ ಸೋಮೇಶ್ವರ ಪುರಸಭೆಯ ಕಂದಾಯ ಅಧಿಕಾರಿ ಹಾಗೂ ಸಿಬ್ಬಂದಿಗೆ ಪೋನ್ ಕರೆ ಮಾಡಿ ಬ್ಲ್ಯಾಕ್ಮೇಲ್ ಮಾಡಿ ಹಣಕ್ಕಾಗಿ ಬೆದರಿಕೆಯೊಡ್ಡಿದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ನಲ್ಲಗುಟ್ಲಪಲ್ಲಿ ಗ್ರಾಮದ ಧನಂಜಯ ರೆಡ್ಡಿ ತೋಟಾ (31) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
2024ರ ಎ.6ರಂದು ಸೋಮೇಶ್ವರ ಪುರಸಭೆಯ ರೆವಿನ್ಯೂ ಆಫೀಸರ್ ಪುರುಷೋತ್ತಮ ಅವರ ಮೊಬೈಲ್ಗೆ ವಾಟ್ಸ್ ಆ್ಯಪ್ ಕರೆ ಮಾಡಿದ ಧನಂಜಯ ರೆಡ್ಡಿ ತೋಟಾ ಎಂಬಾತನು ತಾನು ಲೋಕಾಯುಕ್ತದಿಂದ ಮಾತನಾಡುತ್ತಿರುವುದು ನಿಮ್ಮ ವಿರುದ್ಧ ಅಲಿಗೇಶನ್ ಬಂದಿದೆ. ನಮ್ಮ ಟೆಕ್ನಿಕಲ್ ಆಫಿಸರ್ ನಿಮ್ಮ ಆಫೀಸಿಗೆ ಬರುವ ಮೊದಲು ಅದನ್ನು ಸರಿ ಮಾಡುವುದಾದರೆ ಮಾಡುವ ಎಂದು ಹೇಳಿ, ಹಣ ನೀಡುವಂತೆ ತಿಳಿಸಿದ್ದು ಇಲ್ಲವಾದರೆ ತೊಂದರೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದ ಎನ್ನಲಾಗಿದೆ.
ಈ ಬಗ್ಗೆ ಮೊಬೈಲ್ ನಂಬ್ರವನ್ನು ಟ್ರೂಕಾಲರ್ನಲ್ಲಿ ಪರೀಶೀಲಿಸಿದಾಗ ಡಿ. ಪ್ರಭಾಕರ, ಲೋಕಾಯುಕ್ತ ಪಿ.ಐ ಎಂದು ತೋರಿಸಿದ್ದು, ಈ ಬಗ್ಗೆ ಪುರುಷೋತ್ತಮ ಅವರು ಕರ್ನಾಟಕ ಲೋಕಾಯುಕ್ತ ಮಂಗಳೂರಿನ ಅಧಿಕಾರಿಗಳಿಗೆ ವಿಷಯ ತಿಳಿಸಿದಾಗ ಅಂತಹ ಹೆಸರಿನ ಯಾವುದೇ ಅಧಿಕಾರಿ/ಸಿಬ್ಬಂದಿ ಇರುವುದಿಲ್ಲ ಎಂಬ ವಿಚಾರ ಗೊತ್ತಾಗಿತ್ತು.
ಅಲ್ಲದೆ ಪುರುಷೋತ್ತಮ ಅವರ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಕರಾದ ಅಲ್ಲಿ ನಾಯರ್ ಕೃಷ್ಣ ಇವರಿಗೂ ಕೂಡಾ ಇದೇ ರೀತಿ ಆರೋಪಿ ಬೆದರಿಕೆ ಒಡ್ಡಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು.
ಪುರುಷೋತ್ತಮ ಮತ್ತು ಅವರ ಕಚೇರಿ ಸಿಬ್ಬಂದಿಗೆ ಆರೋಪಿಯು ಕರ್ನಾಟಕ ಲೋಕಾಯುಕ್ತ ಎಂದು ನಂಬಿಸಿ ಅವರಿಂದ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡಿರುವ ಪ್ರಕರಣದ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.
ಆರೋಪಿ ಧನಂಜಯ ರೆಡ್ಡಿ ತೋಟಾ ಇದೇ ರೀತಿಯ ಕೃತ್ಯ ಎಸಗಿದ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಪೊಲೀಸ್ ಠಾಣೆ ಹಾಗೂ ಹೈದರಾಬಾದ್ ನಗರದ ಶಾಬಾದ್ ಪೊಲೀಸ್ ಠಾಣೆಯಲ್ಲಿ 2019ರಲ್ಲಿ ಪ್ರಕರಣ ದಾಖಲಾಗಿರು ವುದು ಪೊಲೀಸರು ನಡೆಸಿದ ತನಿಖೆಯಿಂದ ಬೆಳಕಿಗೆ ಬಂದಿತ್ತು.
ಉಳ್ಳಾಲ ಪೊಲೀಸ್ ಠಾಣಾ ಪಿಎಸ್ಐ ಸಂತೋಷ್ ಕುಮಾರ್ ಹಾಗೂ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿ ರಂಜಿತ್ ಕುಮಾರ್, ಆನಂದ ಬಾಡಗಿ, ಮಂಜುನಾಥ ಅರೋಪಿಯನ್ನು ಪತ್ತೆಮಾಡಿ ಬಂಧಿಸಿರುವುದಾಗಿ ಉಳ್ಳಾಲ ಪೊಲೀಸ್ ಠಾಣೆಯ ಪ್ರಕಟನೆ ತಿಳಿಸಿದೆ.