ಕ್ರೀಡೆಯಲ್ಲಿ ಕ್ರೀಡಾ ಸ್ಪೂರ್ತಿ ಅಗತ್ಯ: ಡಾ. ಬಳ್ಳಾಲ್
ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟ ಉದ್ಘಾಟನೆ
ಮಂಗಳೂರು: ‘ಬ್ಯಾಡ್ಮಿಂಟನ್ ಆಟಗಾರರು ಕ್ರೀಡಾ ಸ್ಪೂರ್ತಿಯನ್ನು ಪ್ರದರ್ಶಿಸಿ ಕ್ರೀಡಾ ಮನೋಭಾವದಿಂದ ಸ್ಪರ್ಧಾ ಕೂಟದಲ್ಲಿ ಪಾಲ್ಗೊಳ್ಳಬೇಕು. ಸೋಲು ಗೆಲುವಿಗೆ ದ್ವಿತೀಯ ಆದ್ಯತೆಯನ್ನು ನೀಡಬೇಕೆಂದು’ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಪ್ರೊಚಾನ್ಸಲರ್ ಡಾ. ಎಚ್.ಎಸ್. ಬಳ್ಳಾಲ್‌ರವರು ಸಲಹೆ ನೀಡಿದ್ದಾರೆ.
ಭಾರತೀಯ ವೈದ್ಯಕೀಯ ಸಂಸ್ಥೆ ಮಂಗಳೂರು ಶಾಖೆಯ ಆಶ್ರಯದಲ್ಲಿ ಐಎಂಎಸದಸ್ಯರಿಗಾಗಿ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಎರಡು ದಿನಗಳ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧಾಕೂಟವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಮುಂದಿನ ವರ್ಷ ಈ ಪ್ರತಿಷ್ಠಿತ ಪಂದ್ಯಾಟವನ್ನು ಮಣಿಪಾಲದಲ್ಲಿ ಆಯೋಜಿಸಲು ಐಎಂಎ ಆಡಳಿತ ಮಂಡಳಿಗೆ ಆಹ್ವಾನ ನೀಡಿ, ಕ್ರೀಡಾಪಟುಗಳಿಗೆ ಯಶಸ್ಸು ಕೋರಿದರು.
ಫಾ.ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕ ವಂ.ರೆ.ಫಾ. ರಿಚರ್ಡ್ ಅಲೋಶಿಯಸ್ ಕುಯೆಲ್ಲೊ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ವೇಣುಗೋಪಾಲ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಈ ಕ್ರೀಡಾಕೂಟವನ್ನು ಮಂಗಳೂರು ಶಾಖೆಯು ಎರಡನೇ ಬಾರಿಗೆ ಆಯೋಜಿಸಿದ್ದು, ಈ ಸ್ಫರ್ಧಾಕೂಟದಲ್ಲಿ 150 ತಂಡಗಳು ಸ್ಫರ್ಧಿಸಲಿವೆ ಎಂದು ಮಾಹಿತಿ ನೀಡಿದರು.
ಐ.ಎಂ.ಎ. ರಾಜ್ಯಾಧ್ಯಕ್ಷ ಡಾ. ಶಿವಕುಮಾರ್ ಲಕ್ಕೊಲ್ ಮಾತನಾಡಿದರು. ವೇದಿಕೆಯಲ್ಲಿ ಡಾ.ಸೋಮಣ್ಣ ಸ್ಮಾರಕ ಬ್ಯಾಡ್ಮಿಂಟನ್ ಕೂಟದ ರಾಜ್ಯಾಧ್ಯಕ್ಷ ಡಾ. ತ್ಯಾಗರಾಜ್, ಐಎಂಎ ಕ್ರೀಡಾ ಸಮಿತಿಯ ಅಧ್ಯಕ್ಷ ಡಾ. ದಿನೇಶ್ ಹೆಗಡೆ, ಐಎಂಎ ಕಾರ್ಯದರ್ಶಿ ಅರ್ಚಿತ್ ಬೋಳಾರ್ ಉಪಸ್ಥಿತರಿದ್ದರು.
ಸಂಘಟನಾ ಅಧ್ಯಕ್ಷ ಡಾ. ಸತೀಶ್‌ಚಂದ್ರ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ನಂದಕಿಶೋರ್ ವಂದಿಸಿದರು. ಡಾ. ಅರ್ಚನ ಭಟ್, ಡಾ. ಕ್ರಿಸ್ತಿನಾ ಗೋವಿಯಸ್ ಕಾರ್ಯಕ್ರಮ ನಿರೂಪಿಸಿದರು.