ಕ್ರೀಡೆ ಉತ್ತಮ ಬಾಂಧವ್ಯಕ್ಕೆ ಪೂರಕ: ಅನುಪಮ್ ಅಗರ್ವಾಲ್
ಮಂಗಳೂರು,ನ.28: ಕ್ರೀಡೆ ಪರಸ್ಪರ ಉತ್ತಮ ಬಾಂಧವ್ಯ ಮೂಡಿಸಲು ಪೂರಕ. ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ; ಕ್ರೀಡಾ ಸ್ಫೂರ್ತಿ ಮುಖ್ಯ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಶುಭ ಹಾರೈಸಿ ದರು.
ದಕ್ಷಿಣ ಕನ್ನಡ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ಗುರುವಾರ ನೆಹರು ಮೈದಾನದಲ್ಲಿ ನಡೆದ ಪತ್ರಕರ್ತರ ಮತ್ತು ಪೊಲೀಸರ ನಡುವಿನ ಕ್ರಿಕೇಟ್ ಪಂದ್ಯಾಟದ ಪ್ರಶಸ್ತಿ ವಿತರಿಸಿ ಮಾತನಾಡುತ್ತಿದ್ದರು.
ಜಿಲ್ಲೆಯ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಸೌಹಾರ್ದ ವಾತವರಣ ಮೂಡಿಸಲು ಪೊಲೀಸರು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳು, ಜಿಲ್ಲೆಯ ಪ್ರಜ್ಞಾವಂತ ನಾಗರೀಕರು ಸಾಮೂಹಿಕವಾಗಿ ಸಹಕಾರ ನೀಡುತ್ತಿರುವುದು ಶ್ಲಾಘನೀಯ. ಈ ನಡುವೆ ವಾರ್ಷಿಕ ಕ್ರೀಡಾ ಕೂಟದಲ್ಲಿ ಭಾಗವಹಿಸುತ್ತಿರುವ ಪತ್ರಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಡಿಸಿಪಿಗಳಾದ ದಿನೇಶ್, ಉಮೇಶ್ ಕುಮಾರ್, ಎಸಿಪಿಗಳಾದ ಮನೋಜ್ ನಾಯಕ್, ಶ್ರೀಕಾಂತ್, ರವೀಶ್ ನಾಯಕ್ , ನಜ್ಮಾ ಫಾರೂಕಿ, ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಂಗಳೂರು ಪೊಲೀಸರ ತಂಡಕ್ಕೆ ಪ್ರಥಮ ಹಾಗೂ ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ತಂಡಕ್ಕೆ ದ್ವಿತೀಯ ಪ್ರಶಸ್ತಿಯನ್ನು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅರ್ಗವಾಲ್ ವಿತರಿಸಿದರು.
ಉತ್ತಮ ದಾಂಡಿಗ ಪ್ರಶಸ್ತಿಯನ್ನು ಪೊಲೀಸ್ ತಂಡದ ಮನೋಜ್ ನಾಯಕ್ ಹಾಗೂ ಉತ್ತಮ ಬೌಲರ್ ಪ್ರಶಸ್ತಿಯನ್ನು ಸಾಗರ್ ಪಡೆದುಕೊಂಡರು.