ದೇಶದಲ್ಲಿ ಕ್ರೀಡೆ ಮತ್ತು ದೈಹಿಕ ಚಟುವಟಿಕೆಯ ಪ್ರಾಮುಖ್ಯತೆಯನ್ನು ಉತ್ತೇಜಿಸಲು ಕ್ರೀಡಾ ದಿನ ಆಚರಣೆ- ಡಾ. ಆಂಟೊನಿ ಪ್ರಕಾಶ್
ಪುತ್ತೂರು: ದೇಶದ ಕ್ರೀಡಾ ಇತಿಹಾಸದಲ್ಲಿ ಶ್ರೇಷ್ಠ ಆಟಗಾರರಲ್ಲಿ ಓರ್ವರು ಎಂದು ಪರಿಗಣಿಸಲಾದ ಭಾರತದ ಪ್ರಸಿದ್ಧ ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನವನ್ನು ಪ್ರತಿವರ್ಷ ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸಲಾ ಗುತ್ತಿದೆ. ಕ್ರೀಡೆಗಳಿಗೆ ಅವರ ಕೊಡುಗೆಗಳನ್ನು ಗೌರವಿಸಲು ಮತ್ತು ದೇಶದಲ್ಲಿ ಕ್ರೀಡೆ ಮತ್ತು ದೈಹಿಕ ಚಟುವಟಿಕೆಯ ಪ್ರಾಮುಖ್ಯತೆಯನ್ನು ಉತ್ತೇಜಿಸಲು ಈ ದಿನವನ್ನು ಸಮರ್ಪಿಸಲಾಗಿದೆ ಎಂದು ಪುತ್ತೂರು ಸಂತ ಫಿಲೋಮಿನಾ ಕಾಲೇಜ್‍ನ ಪ್ರಾಂಶುಪಾಲ ಡಾ. ಆಂಟೊನಿ ಪ್ರಕಾಶ್ ಮೊಂತೆರೋ ತಿಳಿಸಿದರು.
ಅವರು ಮಂಗಳವಾರ ಪುತ್ತೂರಿನ ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಬೆಳ್ಳಿ ಹಬ್ಬ ಸಭಾಭವನದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದಿನ ಕ್ರೀಡಾ ಪಟುಗಳಿಗೆ ಮೇಜರ್ ಧ್ಯಾನ್ ಚಂದ್ ಓರ್ವ ಆದರ್ಶ ವ್ಯಕ್ತಿ. ರಾಷ್ಟ್ರೀಯ ಕ್ರೀಡಾ ದಿನದ ಸಂದರ್ಭದಲ್ಲಿ ಕ್ರೀಡೆಯಲ್ಲಿ ಅಪ್ರತಿಮ ಸಾಧನೆ ನಡೆಸಿದ ಕಾಲೇಜಿನ ಕ್ರೀಡಾಪಟುಗಳನ್ನು ಗುರುತಿಸಿ ಗೌರವಿಸಿದಾಗ ಇತರ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಸಿಗುತ್ತದೆ. ಕ್ರೀಡೆಯು ಮಾನವನ ಮನೋಬಲವನ್ನು ವೃದ್ಧಿಸುತ್ತದೆ. ಕ್ರೀಡಾಪಟುಗಳಲ್ಲಿ ಶಿಸ್ತು, ಸಮಯ ಪ್ರಜ್ಞೆ, ಸಹಕಾರ ಮನೋಭಾವ ಹೆಚ್ಚಿರುತ್ತದೆ" ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆನಡಾದಲ್ಲಿ ನಡೆಯಲಿರುವ ಕಾಮನ್‍ವೆಲ್ತ್ ಕ್ರೀಡೆಯಲ್ಲಿ ಲೈಫ್ ಸೇವಿಂಗ್ ಚಾಂಪಿಯನ್‍ಶಿಪ್ 2023 ರಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾದ ಕಾಲೇಜಿನ ಕ್ರೀಡಾಪಟುಗಳಾದ ತ್ರಿಶೂಲ್ ಗೌಡ, ಸ್ವೀಕೃತ್ ಆನಂದ್, ನೀಲ್ ಮಸ್ಕರೇನಸ್ ಮತ್ತು ಧನ್ವಿತ್ ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವ ಈಜು ತರಬೇತುದಾರ ಪಾರ್ಥ ವಾರಣಾಸಿ, ಕಬಡ್ಡಿ ಕೋಚ್ ಮಹಮ್ಮದ್ ಹಬೀಬ್ ಮತ್ತು ವೈಟ್ ಲಿಫ್ಟಿಂಗ್ ಕೋಚ್ ಪದ್ಮರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾಲೇಜಿನ ಉಪಪ್ರಾಂಶುಪಾಲ ಡಾ| ಎ ಪಿ ರಾಧಾಕೃಷ್ಣ ಸ್ವಾಗತಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ ಕ್ರೀಡಾಪಟುಗಳ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಕಾಲೇಜ್‍ನ ಸಾರ್ವಜನಿಕ ಸಂಪರ್ಕಾಧಿಕಾರಿ ಭಾರತಿ ಎಸ್ ರೈ ವಂದಿಸಿದರು. ಬಿಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರಶಾಂತ್ ರೈ ನಿರೂಪಿಸಿದರು.