ಮಾ.25ರಿಂದ ಎಸೆಸ್ಸೆಲ್ಸಿ ಪರೀಕ್ಷೆ: ದ.ಕ. ಜಿಲ್ಲೆಯಲ್ಲಿ 30,348 ವಿದ್ಯಾರ್ಥಿಗಳು ಹೆಸರು ನೋಂದಣಿ
ಸಾಂದರ್ಭಿಕ ಚಿತ್ರ
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಮಾ.25ರಿಂದ ಆರಂಭಗೊಳ್ಳಲಿರುವ ಎಸೆಸ್ಸೆಲ್ಸಿ ಪರೀಕ್ಷೆಗೆ 30,348 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ. ಅದರಲ್ಲಿ 27,663 ರೆಗ್ಯುಲರ್, 1,053 ಖಾಸಗಿ, 1,632 ಪುನರಾವರ್ತಿತ ವಿದ್ಯಾರ್ಥಿಗಳಿದ್ದಾರೆ.
ಬೆಳಗ್ಗೆ 10:15ರಿಂದ ಮಧ್ಯಾಹ್ನ 1:30ರವರೆಗೆ ಪರೀಕ್ಷೆಗಳು ನಡೆಯಲಿದೆ. ಮಾ.25ರಂದು ಪ್ರಥಮ ಭಾಷೆ ಕನ್ನಡ/ಇಂಗ್ಲಿಷ್/ಸಂಸ್ಕೃತ. ಮಾ.27ರಂದು ಸಮಾಜ ವಿಜ್ಞಾನ. ಮಾ.30ರಂದು ರಾಜ್ಯಶಾಸ್ತ್ರ/ವಿಜ್ಞಾನ. ಎ.2ರಂದು ಗಣಿತ /ಸಮಾಜ ಶಾಸ್ತ್ರ. ಎ.3ರಂದು ಅರ್ಥಶಾಸ್ತ್ರ, ಎ.4ರಂದು ತೃತೀಯ ಭಾಷೆ-ಹಿಂದಿ/ಕನ್ನಡ/ಸಂಸ್ಕೃತ/ಕೊಂಕಣಿ/ತುಳು/ಎನ್ಎಸ್ಕ್ಯೂಎಫ್, ಎ. 6ರಂದು ದ್ವಿತೀಯ ಭಾಷೆ-ಇಂಗ್ಲಿಷ್/ಕನ್ನಡ ಪರೀಕ್ಷೆ ನಡೆಯಲಿದೆ.
*ಜಿಲ್ಲೆಯ ಬಂಟ್ವಾಳದಲ್ಲಿ 17, ಬೆಳ್ತಂಗಡಿಯಲ್ಲಿ 13, ಮಂಗಳೂರು ಉತ್ತರ ವ್ಯಾಪ್ತಿಯಲ್ಲಿ 18, ಮಂಗಳೂರು ದಕ್ಷಿಣ ವ್ಯಾಪ್ತಿಯಲ್ಲಿ 16, ಮೂಡುಬಿದಿರೆಯಲ್ಲಿ 5, ಪುತ್ತೂರು 13 ಹಾಗೂ ಸುಳ್ಯ ವಲಯದಲ್ಲಿ 6 ಸಹಿತ ಜಿಲ್ಲೆಯಲ್ಲಿ 88 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ.
ಪರೀಕ್ಷಾ ಕೇಂದ್ರಗಳಲ್ಲಿ 88 ಮುಖ್ಯ ಅಧೀಕ್ಷಕರು, 42 ಉಪಮುಖ್ಯ ಅಧೀಕ್ಷಕರು, 88 ಕಸ್ಟೋಡಿಯನ್, 88 ಸ್ಥಾನಿಕ ಜಾಗೃತ ದಳದ ಕಾರ್ಯಕ್ಕೆ ಅಧಿಕಾರಿಗಳು, 88 ಮೊಬೈಲ್ ಫೋನು ಸ್ವಾಧೀನಾಧಿಕಾರಿಗಳು, 30 ಮಾರ್ಗಾಧಿಕಾರಿಗಳು, 1,588 ಕೊಠಡಿ ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ.
ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಅಭ್ಯರ್ಥಿಗಳ ಅನುಕೂಲಕ್ಕಾಗಿ ಸೂಕ್ತ ಸೂಚನಾ ಫಲಕಗಳ ವ್ಯವಸ್ಥೆ ಮಾಡಲಾಗಿದೆ. ಅಭ್ಯರ್ಥಿಗಳಿಗೆ ಅಗತ್ಯ ಅಸನದ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರು, ಶೌಚಾಲಯ ಹಾಗೂ ಇತರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಮೊಬೈಲ್ ಸ್ವಾಧೀನಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಹಾಗೂ ಪ್ರಶ್ನಾಪತ್ರಿಕೆ ಅಭಿರಕ್ಷಕರುಗಳ ಸಭೆಯನ್ನು ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು (ಆ), ಶಾಲಾ ಶಿಕ್ಷಣ ಇಲಾಖೆ ಮೂಲಕ ಆಯೋಜಿಸಲಾಗಿದೆ. ಪ್ರಶ್ನೆ ಪತ್ರಿಕೆ ಬಂಡಲ್ಗಳನ್ನು ತಾಲೂಕು/ಜಿಲ್ಲಾ ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ಸಾಗಾಟ ಮಾಡುವ ವಾಹನಕ್ಕೆ ಪೊಲೀಸ್ ಎಸ್ಕಾರ್ಟ್ಗಳನ್ನು ನಿಯೋಜಿಸಲಾಗುತ್ತಿದೆ.