ಕಣಚೂರು ನರ್ಸಿಂಗ್ ಕಾಲೇಜಿನಲ್ಲಿ ರಾಜ್ಯ ಮಟ್ಟದ ಕಾರ್ಯಾಗಾರ

ದೇರಳಕಟ್ಟೆ: ನರ್ಸಿಂಗ್ ವಿದ್ಯಾರ್ಥಿಗಳು ವೈದ್ಯಕೀಯ ವಿಚಾರಗಳ ಬಗ್ಗೆ ಅಧ್ಯಯನದ ಜೊತೆಗೆ ಅಭ್ಯಾಸ ಮಾಡಬೇಕು. ಅಧ್ಯಯನಕ್ಕೆ ಹೆಚ್ಚಿನ ತರಬೇತಿ ಪಡೆಯಬೇಕಾದ ಅಗತ್ಯ ಇದೆ ಎಂದು ಕಣಚೂರು ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್ ನ ಅಸಿಸ್ಟೆಂಟ್ ಪ್ರೊ. ಕ್ಯಾರೊ ಲ್ ಕರಿಷ್ಮಾ ಆಲ್ಫೋನ್ಸ್ ಹೇಳಿದರು.
ಕಣಚೂರು ಕಾಲೇಜ್ ಆಫ್ ನರ್ಸಿಂಗ್ ಸೈನ್ಸಸ್ ಆಶ್ರಯದಲ್ಲಿ ಶನಿವಾರ ತಂತ್ರಜ್ಞಾನ ಮತ್ತು ಕೌಶಲ್ಯ ಎಂಬ ವಿಚಾರದ ಬಗ್ಗೆ ಸ್ಕಿಲ್ ಲ್ಯಾಬ್ ಆಡಿಟೋರಿಯಂನಲ್ಲಿ ನಡೆದ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ವಿಚಾರ ಮಂಡಿಸಿ ಅವರು ಮಾತನಾಡಿದರು.
ಇಂದಿನ ಕಾಲಘಟ್ಟದಲ್ಲಿ ನರ್ಸಿಂಗ್ ಶಿಕ್ಷಣ ಪಡೆಯುವವರಿಗೆ ಕೌನ್ಸಿಲಿಂಗ್ ಮಾಡುವ ಮೂಲಕ ಅರಿವು ಮೂಡಿಸುವ ಕೆಲಸ ಆಗಬೇಕು. ಪ್ರಾಥಮಿಕ ಹಂತದಲ್ಲೇ ಶಿಕ್ಷಕರು ಈ ವಿಚಾರದಲ್ಲಿ ಹೆಚ್ಚು ಪ್ರಾಧಾನ್ಯತೆ ನೀಡಬೇಕು ಎಂದು ಹೇಳಿದರು.
ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಅರಿವಳಿಕೆ ಶಾಸ್ತ್ರದ ಪ್ರಾಧ್ಯಾಪಕ ಮತ್ತು ಹೆಲ್ತ್ ಕೇರ್ ಸಿಮ್ಯುಲೇಶನ್ ಶಿಕ್ಷಣದ ಮುಖ್ಯಸ್ಥ ಡಾ. ಲುಲು ಶೆರೀಫ್ ಮಾತನಾಡಿ, ಎಲ್ಲದಕ್ಕೂ ಮೊದಲು ನಾಯಕತ್ವ ಬೇಕು.ವಿದ್ಯಾರ್ಥಿಗಳ ಶಿಕ್ಷಣ ನಾಯಕತ್ವ ಕ್ಕೆ ಅನುಗುಣವಾಗಿ ಬೆಳೆಯುತ್ತದೆ. ಈಗ ವೈದ್ಯಕೀಯ ಶಿಕ್ಷಣಕ್ಕೆ ಬೇಡಿಕೆ ಇದೆ. ವಿದ್ಯಾರ್ಥಿಗಳು ಪ್ರತಿದಿನ ತರಗತಿಗೆ ಹಾಜ ರಾಗಿ ಅಧ್ಯಯನ ಮಾಡಿದರೆ ಮಾತ್ರ ಶಿಕ್ಷಣ ಮೈಗೂಡಿಸಿಕೊಂಡು ಬರಲು ಸಾಧ್ಯ.ಶಿಕ್ಷಣದ ಜೊತೆ ರೋಗಿಗಳ ರಕ್ಷಣೆ ಹೇಗೆ ಎಂಬ ಬಗ್ಗೆ ತಿಳಿದು ಕೈಗೊಂಡಿರಬೇಕು.ರೋಗಿಗಳ ರಕ್ಷಣೆಯ ಒಂದು ಅಸ್ತ್ರ ನರ್ಸ್ ಗಳಾಗಿರುತ್ತಾರೆ. ನರ್ಸ್ ಶಿಕ್ಷಣ ಪಡೆಯುವವರು ಕೂಡ ಒಂದು ಗುರಿ ಇಟ್ಟುಕೊಂಡಿರಬೇಕು ಎಂದು ಹೇಳಿದರು.
ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ. ಹಾಜಿ ಯು.ಕೆ. ಮೋನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 10 ವರ್ಷಗಳಿಂದ ಇಂತಹ ಕಾರ್ಯಕ್ರಮಗಳು ಏರ್ಪಡಿಸುವ ಮೂಲಕ ವಿದ್ಯಾರ್ಥಿಗಳ ಪ್ರತಿಭೆ ಹೊರತರಲು ಶಿಕ್ಷಕರು ಪ್ರಯತ್ನಿಸುತ್ತಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳಿಗಾಗಿ ಜೀವನವನ್ನೇ ಮುಡಿಪಾಗಿಡುತ್ತಾರೆ. ನಾವು ಪಡೆದ ಶಿಕ್ಷಣವನ್ನು ಸಮಾಜಕ್ಕೆ ಅರ್ಪಿಸಬೇಕು ಎಂಬುದು ಅವರ ಉದ್ದೇಶ ಆಗಿರುತ್ತದೆ ಎಂದು ಹೇಳಿದರು.
ಡೀನ್ ಡಾ. ಶಹನವಾಝ್, ಅಸಿಸ್ಟೆಂಟ್ ಪ್ರೊ. ಪ್ರಿಯಾ ಜ್ಯೋತಿ ಮೊಂತೆರೊ, ಡಾ. ಸೋಮೆಶೇಖರ್ ಕಲ್ಮಾತ್, ಮೆಡಿಕಲ್ ಸುಪರಿಂಟೆಂಡೆಂಟ್ ಡಾ. ಹರೀಶ್ ಶೆಟ್ಟಿ, ಡಾ ಶಮೀಮ, ಡಾ. ರಿಟಾ ಶಾಲಿನಿ ನೊರೊನ್ಹಾ ಉಪಸ್ಥಿತರಿದ್ದರು.
ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಮೋಲಿ ಸಲ್ದಾನ ಸ್ವಾಗತಿಸಿದರು.