ನಿಫಾ ವೈರಸ್ ಸೋಂಕು ರಾಜ್ಯಕ್ಕೆ ಹರಡದಂತೆ ಕಟ್ಟೆಚ್ಚರ: ಸಚಿವ ದಿನೇಶ್ ಗುಂಡೂರಾವ್
ನಾಲ್ಕು ಜಿಲ್ಲೆಗಳ ಜಿಲ್ಲಾ ಆರೋಗ್ಯ ಅಧಿಕಾರಿಗಳ ಸಭೆ
ಮಂಗಳೂರು, ಸೆ.21: ಕೇರಳದಲ್ಲಿ ಕಾಣಿಸಿಕೊಂಡಿರುವ ನಿಫಾ ವೈರಸ್ ಸೋಂಕು ರಾಜ್ಯಕ್ಕೆ ಹರಡದಂತೆ ಕಟ್ಟೆಚ್ಚರ ವಹಿಸ ಲಾಗಿದೆ. ಕರ್ನಾಟಕದಲ್ಲಿ ಯಾರಿಗೂ ಸೋಂಕು ತಟ್ಟಬಾರದು. ಆ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕೇರಳದ ಗಡಿಗೆ ತಾಗಿಕೊಂಡಿರುವ ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳ ಜಿಲ್ಲಾ ಆರೋಗ್ಯ ಅಧಿಕಾರಿಗಳ ಸಭೆಯನ್ನು ಬುಧವಾರ ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ನಿಫಾದ ಬಗ್ಗೆ ಯಾರೂ ಭಯಪಡಬೇಕಾಗಿಲ್ಲ. ಕೇರಳಕ್ಕೆ ಸಮೀಪದಲ್ಲಿರುವ ನಾಲ್ಕು ಜಿಲ್ಲೆಗಳ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಕಾರ್ಯ ನಡೆಯುತ್ತಿದೆ. ಆದರೆ ಒಂದು ಪ್ರಕರಣವನ್ನು ಪತ್ತೆಯಾಗಿಲ್ಲ ಎಂದರು.
ದ.ಕ ಜಿಲ್ಲೆಯ 12 ಚೆಕ್‌ಪೋಸ್ಟ್‌ಗಳಲ್ಲಿ 2184, ಮೈಸೂರಿನ 4 ಚೆಕ್ ಪೋಸ್ಟ್‌ಗಳಲ್ಲಿ 6,500, ಕೊಡಗು 4 ಚೆಕ್‌ಪೋಸ್ಟ್ ಗಳಲ್ಲಿ 1,132 ಮತ್ತು ಚಾಮರಾಜನಗರದ 2 ಚೆಕ್‌ಪೋಸ್ಟ್‌ಗಳಲ್ಲ್ 1,600 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ ಯಾರಲ್ಲೂ ಜ್ವರದ ಲಕ್ಷಣಗಳು ಕಂಡು ಬಂದಿಲ್ಲ ಎಂದು ಹೇಳಿದರು.
ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ಆರೋಗ್ಯ ಇಲಾಖೆಯು ಅಗತ್ಯದ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಗಡಿ ದಾಟಿ ಬರುವವ ರಿಗೆ ಜ್ವರ ಮತ್ತು ಕೆಮ್ಮು ಇದೆಯೋ ಎಂಬ ಬಗ್ಗೆ ಆರೋಗ್ಯ ಇಲಾಖೆಯು ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ.
ಮೈಸೂರಿನ ಹೆಚ್‌ಡಿ ಕೋಟೆಯು ಕೇರಳದಲ್ಲಿ ನಿಫಾ ಕಾಣಿಸಿಕೊಂಡ ಸ್ಥಳಕ್ಕೆ ಸಮೀಪದಲ್ಲಿದೆ. ಈ ಕಾರಣದಿಂದಾಗಿ ಅಲ್ಲಿ ಹೆಚ್ಚು ನಿಗಾವಹಿಸಲಾಗಿದೆ ಎಂದರು.
ಈೀಗಾಗಲೇ ಕೇರಳದಲ್ಲಿ 6 ಮಂದಿಗೆ ನಿಫಾ ಸೋಂಕು ತಟ್ಟಿದೆ. ಈ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ನಾಲ್ವರು ಚೇತರಿಸಿ ಕೊಂಡಿದ್ದಾರೆ. ಸೆ.15ರಂದು ಕೇರಳದಲ್ಲಿ ಕೊನೆಯ ಪ್ರಕರಣ ಪತ್ತೆಯಾಗಿದೆ. ಆದ ಕಾರಣ ಮುಂದೆ ಅಕ್ಟೋಬರ್ 7ರ ತನಕ ಕರ್ನಾಟಕದಲ್ಲಿ ಕಟ್ಟೆಚ್ಚರ ವಹಿಸಲಾಗುವುದು. ಆರೋಗ್ಯ ಇಲಾಖೆಯು ಅಗತ್ಯದ ಕ್ರಮ ಕೈಗೊಂಡಿದೆ ಎಂದರು.
ಕೇರಳದ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವಂತೆ ಇಲ್ಲಿನ ಆರೋಗ್ಯ ಇಲಾಖೆಯ ಅಧಿಕಾರಿ ಗಳಿಗೆ ಸೂಚಿಸಲಾಗಿದೆ. ಯಾರಿಗಾದರೂ ಇಲ್ಲಿ ಸೋಂಕು ಪತ್ತೆಯಾದರೆ ಅವರಿಗೆ ಕ್ವಾರಂಟೈನ್, ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಬೆಡ್‌ಗಳು , ಮಾಸ್ಕ್ ಮತ್ತಿತರ ವ್ಯವಸ್ಥೆಗೆ ಅಗತ್ಯದ ತಯಾರಿ ಕೈಗೊಳ್ಳಲಾಗಿದೆ.
ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಆರೋಗ್ಯ, ಇಲಾಖೆಯ ಜಂಟಿ ನಿರ್ದೇಶಕರಾದ ಡಾ. ತ್ರಿವೇಣಿ, ವಿಭಾಗೀಯ ಸಹ ನಿರ್ದೇಶಕರಾದ ಡಾ. ರಾಜೇಶ್ವರಿ ದೇವಿ, ಉಪ ನಿರ್ದೇಶಕರಾದ ಡಾ. ಪದ್ಮಾ ಎಂ.ಆರ್., ಚಾಮರಾಜನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ. ಚಿದಂಬರ್, ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕುಮಾರ ಸ್ವಾಮಿ, ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್, ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ರಾಜ್ಯ ಮಟ್ಟದ ಮೈಕ್ರೋ ಬಯಾಲಜಿಸ್ಟ್, ಸರ್ವೇಕ್ಷಣಾಧಿಕಾರಿ ಗಳು ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ವೆನ್‌ಲಾಕ್ ಆಸ್ಪತ್ರೆಯ ನೂತನ ಸರ್ಜಿಕಲ್ ಸೂಪರ್ ಸ್ಪೆಷಾಲಿಟಿ ಬ್ಲಾಕ್‌ಗೆ ಬುಧವಾರ ಭೇಟಿ ನೀಡಿ ಅಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ , ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಲು ನಿರ್ಧರಿಸಿದ್ದೆ. ಅದು ಆದರೆ ಸಾಧ್ಯವಾಗಲಿಲ್ಲ. ಮುಂದಿನ ಜಿಲ್ಲೆಗೆ ಬಂದಾಗ ವೆನ್‌ಲಾಕ್‌ಗೆ ಭೇಟಿ ನೀಡಿ ಅಲ್ಲಿನ ಕುಂದುಕೊರತೆಗಳು ಬಗ್ಗೆ , ನಿರ್ವಹಣೆ ಬಗ್ಗೆ ಸಮಗ್ರ ಮಾಹಿತಿ ಪಡೆಯುತ್ತೇನೆ
ವೆನ್‌ಲಾಕ್‌ನಲ್ಲಿ ಡಯಾಲಿಸ್‌ನ 15 ಕೇಂದ್ರಗಳಲ್ಲಿ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಡಯಾಲಿಸ್ ಘಟಕಗಳಲ್ಲಿ ಸಮಸ್ಯೆ ಇದೆ. ಅದನ್ನು ಸರಿಪಡಿಸಲಾಗುವುದು. ರಾಜ್ಯಾದ್ಯಂತ 4 ವಿಭಾಗಗಳ ವ್ಯಾಪ್ತಿಯಲ್ಲಿ ಡಯಾಲಿಸ್ ಕೇಂದ್ರಗಳಿಗೆ ಸಂಬಂಧಿಸಿ ಟೆಂಡರ್ ಕರೆಯಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ವೈದ್ಯರ, ಫಾರ್ಮಾಸಿಸ್ಟ್ , ಡಿ ಗ್ರೂಪ್ ನೌಕರರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಖಾಲಿ ಇರುವ ಡಿ ಗ್ರೂಫ್ ಹುದ್ದೆಗಳಲ್ಲಿ ಶೇ 100ರಷ್ಟು ಹುದ್ದೆಗಳ ತುಂಬಲು ಚಿಂತನೆ ನಡೆಸಲಾಗುವುದು ಎಂದು ದಿನೇಶ್ ಗುಂಡೂರಾವ್ ಎಂದು ಮಾಹಿತಿ ನೀಡಿದರು.