ವಿದ್ಯಾರ್ಥಿಗಳು ಪಠ್ಯೇತರ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು: ಉಮರ್ ಯು.ಎಚ್.

ಉಳ್ಳಾಲ, ಮಾ.1: ವಿದ್ಯಾರ್ಥಿಗಳು ಕೇವಲ ಶಾಲಾ ಪಠ್ಯ ಪುಸ್ತಕಗಳನ್ನು ಮಾತ್ರ ಓದಿದರೆ ಸಾಲದು, ಪಠ್ಯೇತರ ಪುಸ್ತಕಗಳನ್ನು ಕೂಡಾ ಓದುವ ಹವ್ಯಾಸ ಬೆಳೆಸಬೇಕು. ಹಾಗಾದರೆ ಮಾತ್ರ ಬದುಕಿನಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು.ಎಚ್. ಅಭಿಪ್ರಾಯಪಟ್ಟರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ತೊಕ್ಕೊಟ್ಟು ಸಮೀಪದ ಬಬ್ಬುಕಟ್ಟೆಯ ಹಿರಾ ಮಹಿಳಾ ಕಾಲೇಜಿನ ಸಹಯೋಗದಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಬ್ಯಾರಿ ಸಾಹಿತ್ಯ ಕಮ್ಮಟವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಉದಯೋನ್ಮುಖ ಬರಹಗಾರರು ಹೆಚ್ಚು ಹೆಚ್ಚು ಸಾಹಿತ್ಯ ಕೃತಿಗಳನ್ನು ಓದಬೇಕು. ಆವಾಗ ಮಾತ್ರ ಅವರ ಬರೆಹಗಳಿಗೆ ಶಕ್ತಿ ತುಂಬಲು ಸಾಧ್ಯ. ಬ್ಯಾರಿ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ವಹಿಸಬೇಕು. ಬ್ಯಾರಿ ಭಾಷೆಯಲ್ಲಿ ಕಥೆ, ಕವನ, ಕಾದಂಬರಿಗಳನ್ನು ಬರೆಯಬೇಕು ಎಂದು ಉಮರ್ ಯು.ಎಚ್. ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ಆಯಿಶಾ ಅಸ್ಮಿನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯೆ ಆಯಿಶಾ ಯು.ಕೆ. ಮತ್ತು ಅಖಿಲ ಭಾರತ ಬ್ಯಾರಿ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಶಮೀಮಾ ಕುತ್ತಾರ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.
ಅಕಾಡಮಿಯ ಸದಸ್ಯ ಹಮೀದ್ ಹಸನ್ ಮಾಡೂರು ಉಪಸ್ಥಿತರಿದ್ದರು. ಸದಸ್ಯ ಯು.ಎಚ್. ಖಾಲಿದ್ ಉಜಿರೆ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಕಾರ್ಯಕ್ರಮದ ಸದಸ್ಯೆ ಸಂಚಾಲಕಿ ಶಮೀರಾ ಜಹಾನ್ ಸ್ವಾಗತಿಸಿದರು. ಸದಸ್ಯೆ ಸಾರಾ ಅಲಿ ಪರ್ಲಡ್ಕ ಕಾರ್ಯಕ್ರಮ ನಿರೂಪಿಸಿದರು. ಅಕಾಡೆಮಿ ಸಿಬ್ಬಂದಿಗಳಾದ ವಿಜಯ್ ಕೆ. ಮತ್ತು ರಂಝೀನ ಪಾಲ್ಗೊಂಡಿದ್ದರು.