ಸುರತ್ಕಲ್| ಶ್ರೀ ಸುಬ್ರಹ್ಮಣ್ಯ ಶಂಕರ ಸಂಘದಲ್ಲಿ ಅಡವಿಟ್ಟಿದ್ದ ಚಿನ್ನಾಭರಣ ನಾಪತ್ತೆ ಆರೋಪ: ದೂರು ದಾಖಲು
ಸಾಂದರ್ಭಿಕ ಚಿತ್ರ
ಸುರತ್ಕಲ್: ಇತ್ತೀಚೆಗೆ ಪತ್ನಿ ಮತ್ತು ಮಗುವನ್ನು ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ ಪಕ್ಷಿಕೆರೆ ನಿವಾಸಿ ಕಾರ್ತಿಕ್ ಭಟ್ ನ ಸಹಕಾರದೊಂದಿಗೆ ಆತ ಕೆಲಸ ಮಾಡಿಕೊಂಡಿದ್ದ ಶ್ರೀ ಸುಬ್ರಹ್ಮಣ್ಯ ಶಂಕರ ಸಂಘದಲ್ಲಿ ಅಡವಿಟ್ಟಿದ್ದ 10 ಪವನ್ ಚಿನ್ನಾಭರಣ ನಾಪತ್ತೆಯಾಗಿದೆ ಎಂದು ಪಕ್ಷಿಕೆರೆ ಹೊಸಕಾಡು ನಿವಾಸಿ ಮುಹಮ್ಮದ್ ಎಂಬವರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮುಹಮ್ಮದ್ ಅವರಿಗೆ ಹಣಕಾಸಿನ ಸಮಸ್ಯೆ ಎದುರಾದಾಗ ಪರಿಚಯಸ್ಥನೇ ಆಗಿದ್ದ ಪಕ್ಷಿಕೆರೆಯ ಕಾರ್ತಿಕ್ ಭಟ್ ನ ಸಹಕಾರದೊಂದಿಗೆ ಆತ ಕೆಲಸ ಮಾಡಿಕೊಂಡಿದ್ದ ಶ್ರೀ ಸುಬ್ರಹ್ಮಣ್ಯ ಶಂಕರ ಸಂಘದಲ್ಲಿ 2022ರ ಅ. 10ರಂದು 10 ಪವನ್ ಚಿನ್ನಾಭರಣವನ್ನು ಅಡಮಾನವಿಟ್ಟು ಮೂರು ಲಕ್ಷದ ನಾಲ್ಕು ಸಾವಿರ ರೂ. ಪಡೆದುಕೊಂಡಿದ್ದೆ. ಅದಕ್ಕೆ 2024ರ ಸೆಪ್ಟಂಬರ್ ವರೆಗೂ ಪ್ರತೀ ಮೂರು ತಿಂಗಳಿಗೊಮ್ಮೆ 10 ಸಾವಿರ ರೂ. ಯಂತೆ ಬಡ್ಡಿಯನ್ನೂ ಕಾರ್ತಿಕ್ ಭಟ್ಗೆ ನೀಡಿ ಕಟ್ಟುತ್ತಿದ್ದೆ ಎಂದು ದೂರಿದ್ದಾರೆ.
ಆತ ನ.9ರಂದು ಪತ್ನಿ ಮತ್ತು ಮಗುವನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡಿದ್ದ ವಿಷಯ ತಿಳಿದು ತನ್ನ ಸಂಬಂಧಿಕರ ಮನೆಯಲ್ಲಿದ್ದ ನಾನು ಚಿನ್ನಾಭರಣ ಅಡಮಾನ ಇಟ್ಟಿದ್ದ ಬ್ಯಾಂಕ್ ಗೆ ಹೋಗಿ ವಿಚಾರಿಸಿದಾಗ ಅಡಮಾನ ಇಟ್ಟ ನಾಲ್ಕೇ ತಿಂಗಳಲ್ಲಿ ಅಂದರೆ, 2023ರ ಫೆಬ್ರವರಿಯಲ್ಲಿ 3.50 ಲಕ್ಷ ರೂ. ಅಸಲು ಮತ್ತು ಬಡ್ಡಿ ಪಾವತಿಸಿ ಚಿನ್ನಾಭರಣ ಬಿಡುಗಡೆಗೊಳಸಲಾಗಿದೆ ಎಂದು ಮಾಹಿತಿ ನೀಡಿದರು. ಇದರಿಂದ ಆತಂಕಕ್ಕೊಳಗಾಗಿ "ಚಿನ್ನಾಭರಣ ಇಟ್ಟವನು ನಾನು. ಅಡಮಾನ ಇಟ್ಟ ಚೀಟಿಯೂ ನನ್ನಲ್ಲಿದೆ. ಹಾಗಿರುವಾಗ ಯಾರೋ ಹೇಗೆ ನನ್ನ ಚಿನ್ನಾಭರಣ ಬಿಡಿಸಿಕೊಳ್ಳಲು ಸಾಧ್ಯ" ಎಂದು ಪ್ರಶ್ನೆ ಮಾಡಿದೆ. ನಾವು ಹೊಸಬರು ನಮಗೆ ಆ ವಿಚಾರವಾಗಿ ಏನೂ ತಿಳಿದಿಲ್ಲ ಎಂದು ಬ್ಯಾಂಕ್ ಸಿಬ್ಬಂದಿ ಹಿಂದೆ ಕಳುಹಿಸಿದರು ಎಂದು ಮುಹಮ್ಮದ್ ವಾರ್ತಾಭಾರತಿಗೆ ಮಾಹಿತಿ ನೀಡಿದ್ದಾರೆ.
ಬ್ಯಾಂಕ್ನಲ್ಲಿ ಇಟ್ಟಿದ್ದ ನನ್ನ 10 ಪವನ್ ಚಿನ್ನಾಭರಣವನ್ನು ಫೋರ್ಜರಿ ಸಹಿ ಮಾಡಿ ಕಾರ್ತಿಕ್ ಭಟ್ ಬಿಡಿಸಿಕೊಂಡಿರುವ ಸಂಶಯ ಇದೆ. ಅಲ್ಲದೆ, ಈ ಹಗರಣದಲ್ಲಿ ಶ್ರೀ ಸುಬ್ರಹ್ಮಣ್ಯ ಶಂಕರ ಸಂಘದಲ್ಲಿ ಸಿಬ್ಬಂದಿಯ ನೇರ ಶಾಮೀಲಾತಿ ಇದೆ ಎಂದು ಸಂತ್ರಸ್ತ ಮುಹಮ್ಮದ್ ಅವರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ದೂರು ಆಧರಿಸಿ ಶ್ರೀ ಸುಬ್ರಹ್ಮಣ್ಯ ಶಂಕರ ಸಂಘದ ಮ್ಯಾನೇಜರ್ ನ್ನು ಠಾಣೆಗೆ ಕರೆಸಿಕೊಂಡಿದ್ದ ಪೊಲೀಸರು, ಬ್ಯಾಂಕ್ ನಲ್ಲಿ ಇಂತಹಾ ಇನ್ನಷ್ಟು ಪ್ರಕರಣಗಳು ನಡೆದಿರುವ ಶಂಕೆ ಇದ್ದು, ಈ ಕುರಿತಾಗಿ ತಪಾಸಣೆ ನಡೆಸಿ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ವಂಚನೆಗೆ ಸಂಬಂಧಿಸಿ ಸದ್ಯ ಯಾವುದೇ ಪ್ರಕರಣ ದಾಖಲಿಸಿಕೊಳ್ಳದ ಪೊಲೀಸರು, ಬ್ಯಾಂಕ್ ನ ತಪಾಸಣೆಯ ಬಳಿಕ ಪ್ರಕರಣ ದಾಖಲಿಸಿಕೊಳ್ಳಲಿದ್ದಾರೆ ಎಂದು ಪೊಲೀಸ್ ಮೂಲವೊಂದು ಮಾಹಿತಿ ನೀಡಿದೆ.