ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಭೆ
ಮಂಗಳೂರು: ಸುರತ್ಕಲ್‌ನ ಟೋಲ್ ತೆರವು ಹೋರಾಟದಲ್ಲಿ ಭಾಗಿಗಳಾದ 101 ಜನ ಮಂದಿಗೆ ಜಾಮೀನು ಕೊಡಿಸುವ ವಿಚಾರದಲ್ಲಿ ಸಿದ್ದತೆಗಳ ಕುರಿತು ರವಿವಾರ ನಡೆದ ಹೋರಾಟ ಸಮಿತಿ ಸಭೆಯಲ್ಲಿ ಚರ್ಚಿಸಲಾಯಿತು.
ಮಾಜಿ ಸಚಿವ ಅಭಯ ಚಂದ್ರ ಜೈನ್, ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಮಾಜಿ ಉಪಮೇಯರ್‌ಗಳಾದ ಪುರುಷೋತ್ತಮ ಚಿತ್ರಾಪುರ, ಮುಹಮ್ಮದ್ ಕುಂಜತ್ತಬೈಲ್, ಮಾಜಿ ಕಾರ್ಪೊರೇಟರ್‌ಗಳಾದ ಪ್ರತಿಭಾ ಕುಳಾಯಿ, ಅಯಾಝ್ ಕೃಷ್ಣಾಪುರ, ದಯಾನಂದ ಶೆಟ್ಟಿ ಪ್ರಮುಖರಾದ ದಿಲ್‌ರಾಜ್ ಆಳ್ವ, ವಿ ಕುಕ್ಯಾನ್, ಬಿ ಶೇಖರ್, ವಸಂತ ಬೆರ್ನಾಡ್, ಮಂಜುಳಾ ನಾಯಕ್, ರಮೇಶ್ ಟಿ ಎನ್, ರಾಘವೇಂದ್ರ ರಾವ್, ಶೇಖರ ಹೆಜಮಾಡಿ, ಇಮ್ತಿಯಾಝ್, ಶ್ರೀನಾಥ್ ಕುಲಾಲ್, ಸಾಹುಲ್ ಹಮೀದ್ ಬಜ್ಪೆ, ಮೂಸಬ್ಬ ಪಕ್ಷಿಕೆರೆ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.
ಆರೋಪಪಟ್ಟಿಯಲ್ಲಿ ಹೆಸರಿರುವ 30ಕ್ಕೂ ಹೆಚ್ಚು ಹೋರಾಟಗಾರರು ನ್ಯಾಯವಾದಿ ಚರಣ್ ಶೆಟ್ಟಿ ಮಾರ್ಗದರ್ಶನದಲ್ಲಿ ವಕಾಲತ್ತು ಫಾರಂಗೆ ಸಹಿ ಹಾಕಿದರು. ಇನ್ನುಳಿದವರು ಮುಂದಿನ ಗುರುವಾರದೊಳಗಡೆ ಹೋರಾಟ ಸಮಿತಿಯ ಆಯಾಯ ಪ್ರದೇಶದ ಪ್ರಮುಖರ ಸಹಾಯ ಪಡೆದು ವಕಾಲತ್ತು ಫಾರಂ ಭರ್ತಿ ಮಾಡಬೇಕಾಗಿ ಇಂದು ನಡೆದ ಸಭೆ ವಿನಂತಿಸಿದೆ.
ಹೋರಾಟಗಾರರು ನ್ಯಾಯಾಯಕ್ಕೆ ಹಾಜರಾಗುವ ಜುಲೈ 6ರಂದು ಹೋರಾಟ ಸಮಿತಿಯ ಪ್ರಮುಖರು, ಸಹಭಾಗಿ ಸಂಘಟನೆಗಳ ಪದಾಧಿಕಾರಿಗಳು ನ್ಯಾಯಾಲಯದಲ್ಲಿ ಹಾಜರಿದ್ದು ಮೊಕದ್ದಮೆ ಎದುರಿಸುತ್ತಿರುವ ಹೋರಾಟಗಾರರ ಜೊತೆಗೆ ಸೌಹಾರ್ದತೆ ಪ್ರಕಟಿಸಬೇಕಾಗಿ ಹೋರಾಟ ಸಮಿತಿ ಮನವಿ ಮಾಡಿದೆ.