ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೂಳೂರು ಸೇತುವೆ ಬಳಿ ಪ್ರತಿಭಟನೆ
ಸುರತ್ಕಲ್, ಅ.1: ಮಂಗಳೂರು ಉತ್ತರದ ಶಾಸಕರಿಗೆ ಅಭಿವೃದ್ಧಿಯ ಭಾಷೆಯೇ ಗೊತ್ತಿಲ್ಲ. ಅಭಿವೃದ್ಧಿಯ ಕುರಿತು ಮಾತನಾಡಿಯೇ ಅವರಿಗೆ ಗೊತ್ತಿಲ್ಲ. ಅವರಿಗೆ ತಿಳಿದಿರುವುದು ಧರ್ಮಗಳ ಮಧ್ಯೆ ಪ್ರಚೋಧಿಸುವ ಭಾಷೆ ಮಾತ್ರ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಶಾಸಕ ಭರತ್ ಶೆಟ್ಟಿ ಅವರ ವಿರುದ್ಧ ಕಿಡಿಕಾರಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ರ ದುರಾವಸ್ಥೆ ಮತ್ತು ಕೂಳೂರು ಸೇತುವೆಯ ಆಮೆಗತಿಯ ಕಾಮಗಾರಿಗಳನ್ನು ಖಂಡಿಸಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೂಳೂರು ಸೇತುವೆಯ ಬಳಿ ಸಡೆಸಲಾದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಪಂಪ್ವೆಲ್ ಮೇಲ್ಸೇತುವೆ ಮಾಡಲು ದ.ಕ. ಸಂಸದರಿಗೆ 10 ವರ್ಷ ಬೇಕಾಯಿತು. ಇನ್ನು ಕೆಪಿಟಿ, ನಂತೂರು ಸೇತುವೆ ನಿರ್ಮಾಣಕ್ಕೆ 20ವರ್ಷ ಬೇಕಾಗಬಹುದು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರ ಹಿಡಿಯಲಿದೆ. ಆ ಬಳಿಕ ನಾವೇ ಒಂದೆರಡು ವರ್ಷಗಳಲ್ಲಿ ಇಲ್ಲಿನ ಸೇತುವೆಗಳನ್ನು ನಿರ್ಮಾಣ ಮಾಡುತ್ತೇವೆ. ಅಲ್ಲಿಯ ವರೆಗೂ ನೀವು ದಯಮಾಡಿ ಸುಮ್ಮನಿರಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರ ವಿರುದ್ಧ ವ್ಯಂಗ್ಯವಾಡಿದರು.
ಸುರತ್ಕಲ್ ಟೋಲ್ ಗೇಟ್‌ನಲ್ಲಿ ಟೋಲ್ ಸಂಗ್ರಹಕ್ಕೆ ಬೇಕಾಗುವಂತೆ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ ಇನಾಯತ್ ಅಲಿ, ಮೊದಲು ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆಗಳನ್ನು ಪರಿಹರಿಸುವ ಕಡೆ ಗಮನಕೊಡಿ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇದ ಕ್ಕಿಂತಲೂ ಉಗ್ರ ಸ್ವರೂಪದ ಹೋರಾಟಗಳನ್ನು ಸಂಘಟಿಸಲಾಗುವುದು ಎಂದು ಶಾಸಕರು ಮತ್ತು ಸಂಸದರಿಗೆ ಎಚ್ಚರಿಕೆ ನೀಡಿದರು.
ಬಳಿಕ ಮಾತನಾಡಿದ ಕಾಂಗ್ರೆಸ್ ಮುಖಂಡ ಎಂ.ಜಿ. ಹೆಗ್ಡೆ, ನಮ್ಮ ಸಂಸದರು, ರಸ್ತೆಗಳ ಹೊಂಡಗುಂಡಿಗಳ ಬಗ್ಗೆ ಮಾತ ನಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾಡನಾಡುವಂತೆ ಸಾರ್ವಜಿಕರಿಗೆ ಕರೆ ನೀಡುತ್ತಿದ್ದಾರೆ. ದ.ಕ ಜಿಲ್ಲೆಯಲ್ಲಿ ವಾಹನ ಸವಾರರಿಂದ ಟೋಲ್ ಸಂಗ್ರಹ ಮಾಡಿಕೊಂಡು ಸವಾರರಿಗೆ ಯಾವುದೇ ರೀತಿಯ ಮೂಲಸೌಕರ್ಯಗಳನ್ನೂ ನೀಡಲಾ ಗುತ್ತಿಲ್ಲ. ಇಲ್ಲಿನ ಹೆದ್ದಾರಿ ವಾಹನ ಸವಾರರಿಗೆ ಸಾಪವಾಗಿ ಪರಿಣಮಿಸಿದೆ ಎಂದು ನುಡಿದರು.
ಪ್ರತಿಭಟನೆಯಲ್ಲಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ, ಕಾರ್ಪೊರೇಟರ್ ಅನಿಲ್ ಕುಮಾರ್, ಹರಿನಾಥ್, ಶಶಿದರ ಹೆಗ್ಡೆ, ಗೋವರ್ಧನ್ ಶೆಟ್ಟಿಗಾರ್, ಪ್ರತಿಭಾ ಕುಳಾಯಿ, ಮಹಾಬಲ ಮಾರ್ಲ, ಪದ್ಮನಾಬ ಅಮೀನ್, ನಾಗವೇಣಿ, ಕವಿತಾ ಸನಿಲ್, ಚಂದ್ರಹಾಸ ಪೂಜಾರಿ, ಶಮೀರ್ ಕಾಟಿಪಳ್ಳ, ಮೆಲ್ವಿನ್ ಡಿಸೋಜಾ, ರವಿಶ್ರಿಯಾನ್, ರಾಜೇಶ್ ಶೆಟ್ಟಿ ಪಡ್ರೆ, ಹಂಝ, ರಾಜೇಶ್ ಕುಳಾಯಿ, ಅಯಾಝ್ ಕೃಷ್ನಾಪುರ, ರೆಹ್ಮಾನ್ ಖಾಣ್ ಕುಂಜತ್ತಬೈಲ್ ಮೊದಲಾದವರು ಉಪಸ್ಥಿತರಿದ್ದರು.