ಸುರತ್ಕಲ್: ಮಹಿಳಾ ಕಾರ್ಮಿಕರ ವಜಾ; ಎಚ್ ಪಿ ಸಿ ಎಲ್ ಘಟಕದ ಕಾರ್ಮಿಕರ ಮುಷ್ಕರ
ಸುರತ್ಕಲ್: ಎಚ್ ಪಿ ಸಿ ಎಲ್ ಅಡುಗೆ ಅನಿಲ ಬುಲೆಟ್ ಟ್ಯಾಂಕರ್ ತುಂಬಿಸುವ ಘಟಕದ ಕಾರ್ಮಿಕರು ಏಕಾಏಕಿ ಬುಧವಾರ ಮುಷ್ಕರ ನಡೆಸಿದರು.
ಸುಮಾರು 25 ವರ್ಷಗಳಿಂದ ಎಚ್ ಪಿ ಸಿ ಎಲ್ ಅಡುಗೆ ಅನಿಲ ದ ಬುಲೆಟ್ ಟ್ಯಾಂಕರ್ ತುಂಬಿಸುವ ಘಟಕದಲ್ಲಿ ಸ್ಥಳೀಯ ಕಾರ್ಮಿಕರು ದುಡಿಯುತ್ತಿದ್ದು, ಅವರೊಂದಿಗೆ ಗಾರ್ಡನ್ ಕೆಲಸ ಮಾಡುತ್ತಿದ್ದ ಐದು ಮಂದಿ ಮಹಿಳೆಯರನ್ನು ಯಾವುದೇ ಸೂಚನೆ ನೀಡದೆ ಏಕಾಏಕಿ ಕೆಲಸದಿಂದ ತೆಗೆದು ಹಾಕಿ ಬೇರೆ ಕಾರ್ಮಿಕರನ್ನು ನೇಮಿಸಿದ್ದಾರೆ ಎಂದು ಕಾರ್ಮಿಕರು ದೂರಿದ್ದಾರೆ.
ಮಹಿಳಾ ಕಾರ್ಮಿಕರನ್ನು ಕೆಲಸದಿಂದ ಕೈಬಿಟ್ಟಿರುವುದನ್ನು ಪ್ರತಿಭಟಿಸಿ ಘಟಕದ ಎಲ್ಲಾ ಕಾರ್ಮಿಕರು ಮುಷ್ಕರ ನಡೆಸಿದರು. ಈ ವೇಳೆ ಎಚ್ ಪಿಸಿಎಲ್ ಅಧಿಕಾರಿಗೆ ಮುಷ್ಕರ ನಿರತರನ್ನು ಭೇಟಿಯಾಗಿ, ಮಹಿಳಾ ನೌಕರರು ಬಂದು ಸಂಸ್ಥೆಯ ಜೊತೆ ಮಾತುಕತೆ ನಡೆಸಲು ಅವಕಾಶವಿದೆ. ಅದುಬಿಟ್ಟು ಎಲ್ಲರೂ ಸೇರಿಕೊಂಡು ಮುಷ್ಕರ ನಡೆಸಿ ಅನಾಹುತಗಳು ನಡೆದರೆ ನೌಕರರೇ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ನೌಕರರ ಮುಷ್ಕರದಿಂದಾಗಿ ಅಡುಗೆ ಅನಿಲ ಬುಲೆಟ್ ಟ್ಯಾಂಕರ್ ಸರಬರಾಜು ಮಾಡುವ ಕಾರ್ಯವು ಸಗಿತಗೊಂಡಿದ್ದು, ಲಾರಿಗಳು ಸಾಲಾಗಿ ನಿಲ್ಲುವಂತಾಗಿದೆ.
ಈ ಹಿಂದೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದ ಕಾರ್ಮಿಕರನ್ನು ಕೆಲಸದಿಂದ ತೆಗೆಯದೆ ಕೆಲಸದಲ್ಲಿ ಮುಂದುವರಿಸಲು ಕಂಪೆನಿ ಅವಕಾಶ ಮಾಡಿಕೊಡಬೇಕೆಂದು ಕಾರ್ಮಿಕರ ಆಗ್ರಹಿಸಿದ್ದಾರೆ.