ಸುರತ್ಕಲ್| ಜನತಾ ಕಾಲನಿ ಶಾಲೆಯ ಭೂ ಹಗರಣದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಮೀಲು: ಬಿ.ಕೆ. ಇಮ್ತಿಯಾಝ್ ಆರೋಪ
ಡಿವೈಎಫ್‌ಐ ನೇತೃತ್ವದಲ್ಲಿ ಹಕ್ಕೊತ್ತಾಯ ಸಭೆ
ಸುರತ್ಕಲ್: ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಾನ-ಕಟ್ಲ ಜನತಾ ಕಾಲನಿ ಶಾಲೆಯ ಆಟದ ಮೈದಾನದ ಭೂಮಿ ಕಬಳಿಸಿದ ಪ್ರಕರಣದ ತನಿಖೆಗೆ ಒತ್ತಾಯಿಸಿ, ಸರಕಾರಿ ಶಾಲೆ ಉಳಿಸಬೇಕು ಎಂಬ ಸಂಕಲ್ಪದೊಂದಿಗೆ ರವಿವಾರ ಶಾಲೆಯ ವಠಾರದಲ್ಲಿ ಡಿವೈಎಫ್ ಐ ನೇತೃತ್ವದಲ್ಲಿ ಹಕ್ಕೊತ್ತಾಯ ಸಭೆ ನಡೆಯಿತು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಡಿವೈಎಫ್ ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಸರಕಾರಿ ಶಾಲೆಯ ಜಮೀನನ್ನು ಪೋರ್ಜರಿ ಮಾಡಿ ಮಾರಾಟ ಮಾಡಿರುವ ಶಂಕೆ ಇದೆ. ಈ ಸಂಬಂಧ ಶಿಕ್ಷಣ ಇಲಾಖೆ ಯಾಕೆ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಈ ಭೂಮಾಫಿಯದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದ ಅವರು, ಶಾಲೆಯ ಭೂಮಿ ಅತಿಕ್ರಮಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ಬಂದಿವೆ. ಶಾಲೆಯ ವತಿಯಿಂದ ದ.ಕ. ಬಿಇಒ ಅವರಿಗೆ ದೂರನ್ನೂ ನೀಡಲಾಗಿದೆ. ಆದರೂ ಬಿಇಒ ಅವರು ಕ್ರಮಕ್ಕೆ ಮುಂದಾಗಿಲ್ಲ. ಕನಿಷ್ಟ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿಯೂ ಇಲ್ಲ. ಹೀಗಾಗಿ ಬಿಇಒ ಅವರ ನಡೆ ಅನುಮಾನವನ್ನು ಹುಟ್ಟು ಹಾಕಿದ್ದು ಅವರೂ ಭೂ ಕಳ್ಳರೊಂದಿಗೆ ಶಾಮೀಲಾಗಿದ್ದಾರೆ ಎಂಬ ಅನುಮಾನಗಳಿವೆ ಎಂದರು.
ಸರಕಾರಿ ಶಾಲೆಯ ಬಗ್ಗೆ ಸರಕಾರಕ್ಕೆ ಇರುವ ನಿರ್ಲಕ್ಷ್ಯ ಧೋರಣೆಯೇ ಭೂಗಳ್ಳರಿಗೆ ಸಹಾಯ ಆಗುತ್ತಿದೆ. ದಾಖಲೆ ಪ್ರಕಾರ ಶಾಲೆಯ ಹೆಸರಿನಲ್ಲಿ ಇರುವ 1.60 ಎಕ್ರೆ ಭೂಮಿಯನ್ನು ಸಂರಕ್ಷಣೆ ಮಾಡಲು ಸರಕಾರ ವಿಫಲವಾಗಿದೆ. ಸರಕಾರಿ ಶಾಲೆಯ ಭೂಮಿಯ ಕಬಳಿಕೆ ರಾಜಕೀಯ ಪ್ರಭಾವ ಮತ್ತು ಅಧಿಕಾರಿಗಳ ಶಾಮೀಲಾತಿ ಇಲ್ಲದೆ ಭೂ ಮಾಫಿಯಗಳಿಗೆ ಭೂ ಕಬಳಿಸಲು ಸಾಧ್ಯವಿಲ್ಲ ಎಂದ ಅವರು ಯಾವುದೇ ಕಾರಣಕ್ಕೂ ಶಾಲೆಯ ಒಂದಿಂಚು ಭೂಮಿ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಸರಕಾರಿ ಶಾಲೆಯನ್ನು ಉಳಿಸುವ ಹೋರಾಟವನ್ನು ತೀವ್ರಗೊಳಿಸಲಿದ್ದೇವೆ ಎಂದರು.
ಬಳಿಕ ಮಾತನಾಡಿದ ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷೆ ವಾರಿಜ, ಈ ಶಾಲೆಗಾಗಿ ಅಂದಿನ ದಿನಗಳಲ್ಲಿ ಹೆಣಗಾಡಿದ್ದವರು ಏನಾದರು ಇದ್ದಿದ್ದರೆ, ಇಂದು ಈ ಭೂಕಳ್ಳತನ ನಡೆಯುತ್ತಿರಲಿಲ್ಲ. ಸ್ಥಳೀಯರು, ಹಳೆ ವಿದ್ಯಾರ್ಥಿಗಳು, ಪೋಷಕರು ಒಂದಾಗಿ ನಿಂತರೆ ಯಾವುದೇ ಶಕ್ತಿಯನ್ನೂ ಸೋಲಿಸಿ ನಮ್ಮ ಶಾಲೆಯ ಭೂಮಿಯನ್ನು ಕಾಪಾಡಿಕೊಳ್ಳ ಬಹುದು. ಇಲ್ಲಿ ಯಾರಿಗೂ ಹೆದರುವ ಪ್ರಶ್ನೆಯೆ ಬರುವುದಿಲ್ಲ. ಯಾರದೋ ಆಸ್ತಿಗೆ ನಾವು ಕನ್ನಹಾಕುತ್ತಿಲ್ಲ. ನಮ್ಮ ಸರಕಾರಿ ಶಾಲೆಯ ಆಸ್ತಿಗೆ ಕನ್ನ ಹಾಕಿರುವವರನ್ನು ನಾವು ಬಿಡುವುದೂ ಇಲ್ಲ. ಮುಂದೆ ನಡೆಯುವ ಎಲ್ಲಾ ರೀತಿಯ ಹೋರಾಟಗಳಲ್ಲಿ ಗ್ರಾಮದ ಎಲ್ಲರೂ ಹೋರಾಟ ಸಮಿತಿಯೊಂದಿಗೆ ಭಾಗವಹಿಸುವುದಾಗಿ ಗ್ರಾಮಸ್ಥರ ಪರವಾಗಿ ಭರವಸೆ ನೀಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಖೈರುನ್ನಿಸ ಅಧ್ಯಕ್ಷತೆ ವಹಿಸಿದ್ದರು. ಡಿವೈಎಫ್ಐ ಮುಖಂಡರಾದ ಶ್ರೀನಾಥ್ ಕುಲಾಲ್, ಬಿ.ಕೆ. ಮಕ್ಸೂದ್, ಸಾದಿಕ್ ಕಿಲ್ಪಾಡಿ, ಶೈಫರ್ ಆಲಿ, ಶರೀಫ್ ಜನತಾಕಾಲನಿ, 6ನೇ ವಾರ್ಡ್ ಕಾಂಗ್ರೆಸ್ ಅಧ್ಯಕ್ಷರಾದ ಕಿಶೋರ್ ಶೆಟ್ಟಿ, ಅಸ್ಕಾಫ್ ಜನತಾ ಕಾಲನಿ, ಅಸ್ಕರ್ ಅಲಿ, ದಯಾನಂದ ಶೆಟ್ಟಿ, ಕೆ. ಪಿ. ಅಬೂಬಕ್ಕರ್, ಫಾರೂಕ್, ಅಮೀರ್, ಆಸೀಫ್, ಶಾಫಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಹರೀನಾಕ್ಷಿ, ಜನೆಟ್ ರೇಖಾ, ಜೋಸೆಫ್, ಮಯ್ಯದ್ದಿ, ಐ.ಮುಹಮ್ಮದ್, ಕಾನ ರಿಕ್ಷಾ ಚಾಲಕರ ಸಂಘದ ಮುಖಂಡರಾದ ಅಬ್ದುಲ್ ಬಶೀರ್, ಲಕ್ಷ್ಮೀಶ ಅಂಚನ್ ಮುಂತಾದವರು ಉಪಸ್ಥಿತರಿದ್ದರು.
"ಹಿರಿಯರ ಪರಿಶ್ರಮದಿಂದ ಮಂಜೂರಾದ ಶಾಲೆಯನ್ನು ಯಾವ ಬೆಲೆ ತೆತ್ತಾದರೂ ಉಳಿಸುತ್ತೇವೆ. ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷವೇ ಭೂ ಅತಿಕ್ರಮಣಕ್ಕೆ ಕಾರಣ"
-ವಾರಿಜಾ, ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷೆ
ನ.27ರಂದು ಬೃಹತ್ ಹೋರಾಟ: ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಾನ-ಕಟ್ಲ ಜನತಾ ಕಾಲನಿ ಶಾಲೆಯಲ್ಲಿ ನಡೆದಿರು ಭೂ ಹಗರದ ವಿರುದ್ಧ ಹೋರಾಡುವ ಸಲುವಾಗಿ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಾನ-ಕಟ್ಲ ಜನತಾ ಕಾಲನಿ ಉಳಿಸಿ ಹೋರಾಟ ಸಮಿತಿಯನ್ನು ರಚಿಸಲಾಯಿತು. ಬಳಿಕ ಹೋರಾಟ ಸಮಿತಿಯ ನೇತೃತ್ವದಲ್ಲಿ ನ.27ರಂದು ಶಾಲೆಯ ಆಟದ ಮೈದಾನದಲ್ಲಿ ಬೃಹತ್ ಹೋರಾಟವನ್ನು ಸಂಘಟಿಸುವುದಾಗಿ ನಿರ್ಣಯಿಸಲಾಯಿತು. ಹೋರಾಟದಲ್ಲಿ ಕಾನೂನು ಹೋರಾಟದ ಸಲುವಾಗಿ ವಕೀಲರು, ಜನಪರ ಹೋರಾಟಗಾರರು, ಜಿಲ್ಲಾ ಮಟ್ಟದ ಶಾಲಾಭಿವೃದ್ಧಿ ಸಂಘದ ಪದಾಧಿಕಾರಿ ಗಳನ್ನು ಕರೆಸುವುದಾಗಿ ತೀರ್ಮಾನಿಸಲಾಯಿತು.