ಸುರತ್ಕಲ್ | ಕಿರುಕುಳ ಆರೋಪ : ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಆತ್ಮಹತ್ಯೆಗೆ ಯತ್ನಿಸಿದ ಯುವತಿ
ಸುರತ್ಕಲ್ : ಯುವಕನೊಬ್ಬ ಮೆಸೆಂಜರ್ ಮೂಲಕ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದ ಯುವತಿಯೊಬ್ಬಳು ನ್ಯಾಯ ದೊರೆತಿಲ್ಲ ಎಂದು ಆರೋಪಿಸಿ ಆತ್ಮಹತ್ಯೆಗೆ ಯತ್ನಿಸಿ, ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಘಟನೆ ಶುಕ್ರವಾರ ವರದಿಯಾಗಿದೆ.
ಯುವತಿಯು ಸುರತ್ಕಲ್ ಇಡ್ಯಾ ಸದಾಶಿವ ನಗರದಲ್ಲಿ ಅಂಗಡಿ ನಡೆಸುತ್ತಿದ್ದು, ಯುವಕ ಆಕೆಯ ಅಂಗಡಿ ಬಳಿಯ ನಿವಾಸಿ ಶಾರಿಕ್ ಎಂದು ತಿಳಿದು ಬಂದಿದೆ.
ಯುವಕ ಫೇಸ್ ಬುಕ್ ಮೆಸೆಂಜರ್ ಮೂಲಕ ನನಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದು, ಲೈಂಗಿಕತೆಗೆ ಆಹ್ವಾನಿಸುತ್ತಿದ್ದ. ಬರದಿದ್ದರೆ ತುಂಡು ತುಂಡುಗಳಾಗಿ ಮಾಡುತ್ತೇನೆ ಎಂದು ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಿ ಎರಡು ದಿನಗಳ ಹಿಂದೆ ಯುವತಿ ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದಳು ಎನ್ನಲಾಗಿದೆ.
ಯುವತಿಯ ದೂರು ಆಧರಿಸಿ ಪೊಲೀಸರು ಯುವಕ ಮತ್ತು ಆತನ ಮನೆಯವರು, ಕೆಲ ಮುಖಂಡರು ಹಾಗೂ ಯುವತಿಯ ಮನೆಯವರನ್ನು ಠಾಣೆಗೆ ಕರೆಸಿದ್ದರು. ಅಲ್ಲಿ ವಿಚಾರಣೆ ನಡೆಸಿದ ಪೊಲೀಸರು, ಯುವಕ ಯಾವುದೇ ಮೆಸೇಜ್ ಮಾಡಿಲ್ಲ ಎಂದು ತಿಳಿದುಕೊಂಡು ಆತನನ್ನು ಮನೆಗೆ ಕಳುಹಿಸಿದ್ದರು ಎಂದು ತಿಳಿದು ಬಂದಿದೆ.
ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಬೇಸರದಲ್ಲಿ ಯುವತಿ ಗುರುವಾರ ತಡರಾತ್ರಿ ಡೆತ್ ನೋಟ್ ಬರೆದಿಟ್ಟು 3.30ರ ಸುಮಾರಿಗೆ ಸುಮಾರು 10 ಡೊಲೊ 650 ಮಾತ್ರಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಳು ಎನ್ನಲಾಗಿದೆ. ಆದರೆ, ಬೆಳಗ್ಗೆ 8ಗಂಟೆಯ ಸುಮಾರಿಗೆ ಆಕೆಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಮನೆಯವರು ವಿಚಾರಿಸಿದಾಗ ಆತ್ಮಹತ್ಯೆ ಮಾಡಿಕೊಳ್ಳಲೆಂದು ಮಾತ್ರೆ ನುಂಗಿರುವುದಾಗಿ ತಿಳಿಸಿದ್ದಾಳೆ. ಮನೆಯವರು ಆಕೆಯನ್ನು ತಕ್ಷಣ ಸುರತ್ಕಲ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಆಕೆಯನ್ನು ಕಂಕನಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಸದ್ಯ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಕೊಳ್ಳುತ್ತಿದ್ದಾಳೆ ಎಂದು ತಿಳಿದು ಬಂದಿದೆ.
ಸದ್ಯ ಘಟನೆಗೆ ಸಂಬಂಧಿಸಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕು ಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.