ಸುರತ್ಕಲ್| ಬಾಳ ಗ್ರಾಮ ಪಂಚಾಯತ್ನಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ: ಶಂಕರ್ ಜೋಗಿ ಸ್ಪಷ್ಟನೆ
ಶಂಕರ್ ಜೋಗಿ
ಸುರತ್ಕಲ್: ಬಾಳ ಗ್ರಾಮ ಪಂಚಾಯತ್ನಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ವೈಯಕ್ತಿಕ ಹಿತಾಸಕ್ತಿಯಿಂದ ಮತ್ತು ಮುಂಬರುವ ಪಂಚಾಯತ್ ಚುನಾವಣೆಯ ಉದ್ದೇಶದಿಂದ ಆರೋಪ ಮಾಡಲಾಗಿದೆ ಎಂದು ಬಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಶಂಕರ್ ಜೋಗಿ ಸ್ಪಷ್ಟನೆ ನೀಡಿದ್ದಾರೆ.
ಬಾಳ ಗ್ರಾಮದ ಕುಂಬಳಕೆರೆ ಎಂಬಲ್ಲಿ ಸಮುದಾಯ ಆರೋಗ್ಯ ಉಪಕೇಂದ್ರಕ್ಕೆ ಕಾದಿರಿಸಲಾದ 10 ಸೆಂಟ್ಸ್ ವಿಸ್ತೀರ್ಣ ನಿವೇಶನದ ಜಾಗಕ್ಕೆ ಗಡಿ ಗುರುತು ಮಾಡಿ ತಡೆಗೋಡೆಯನ್ನು ನಿರ್ಮಿಸಲಾಗಿರುತ್ತದೆ. ಬೇಂಕಿನಾಥೇಶ್ವರ ದೇವಸ್ಥಾನದ ಬಳಿ 5 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಲಾಗಿರುವ ಶೌಚಾಲಯ ಜಿಲ್ಲಾ ಪಂಚಾಯತ್ ನ ಅನುದಾನವಾಗಿರುತ್ತದೆ. ಬಾಳ ಗ್ರಾ.ಪಂ ವ್ಯಾಪ್ತಿಯಲ್ಲಿ ನಿರ್ಮಾಣವಾದ ಘನ ತ್ಯಾಜ್ಯ ಘಟಕಕ್ಕೆ 15ನೇ ಹಣಕಾಸು, ಪಂಚಾಯತ್ ನಿಧಿ ಸ್ವಚ್ಚ ಭಾರತ್ ಅನುದಾನದಲ್ಲಿ ಜಂಟಿಯಾಗಿ ಖರ್ಚು ಭರಿಸಿ ನಿರ್ಮಿಸಲಾಗಿದೆ. ಒಣಕಸ ವಿಲೇವಾರಿಗೆ ತಿಂಗಳಿಗೆ 37ಸಾವಿರ ರೂ. ಖರ್ಚು ಆಗುತ್ತಿದ್ದು, ಸರಕಾರದ ಆದೇಶದಂತೆ ಸ್ವಸಹಾಯ (ಮಹಿಳಾ ) ಒಕ್ಕೂಟದ ಗುಂಪುಗಳಿಗೆ ಒಪ್ಪಂದದ ಮೂಲಕ ನೀಡಲಾಗಿದೆ ಎಂದು ತಿಳಿಸಿದರು.
ಬಾಳ ಗ್ರಾಮ ಪಂಚಾಯತ್ ನಲ್ಲಿ ಆಡಳಿತ ಸಮಿತಿ ಸಾಮಾನ್ಯ ಸಭೆಗಳಲ್ಲಿ ವಿಷಯ ಪ್ರಸ್ತಾಪಿಸಿ ಕ್ರಮಕೈಗೊಳ್ಳುವ ಬದಲು ಸರ್ವಾಧಿಕಾರಿಗಳಂತೆ ತಮಗೆ ಬೇಕಾದ ಹಾಗೆ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಅವ್ಯವಹಾರ ನಡೆಸಿರು ವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂಬ ರೇಖಾ ಶೆಟ್ಟಿ ಅವರ ಆರೋಪ ಸತ್ಯಕ್ಕೆ ದೂರವಾದ ವಿಚಾರ. ಗ್ರಾಮ ಪಂಚಾಯತ್ ವ್ಯಾಪ್ತಿಗೆ ಹಲವಾರು ಸಂಸ್ಥೆಗಳ ಸಿಎಸ್ಆರ್ ನಿಧಿಯಿಂದ ಮೂಲಭೂತ ಸೌಕರ್ಯ ಮತ್ತು ಆರ್ಥಿಕ ಸಬಲೀಕ ರಣಕ್ಕಾಗಿ ಮಹಿಳೆಯರಿಗೆ ಹೊಲಿಗೆಯಂತ್ರಗಳನ್ನು ನೀಡಿರುವುದರಿಂದ ಗ್ರಾಮದ ಪ್ರಗತಿಯನ್ನು ಸಹಿಸಲಾಗದೆ ವೈಯಕ್ತಿಕ ಹಿತಾಸಕ್ತಿಯಲ್ಲಿ ಮಾಡಿರುವ ಆರೋಪವಾಗಿರುತ್ತದೆ. ಅಲ್ಲದೇ, ಮುಂದೆ ಬರುವ ಪಂಚಾಯತ್ ಚುನಾವಣೆಯ ಉದ್ದೇಶ ದಿಂದ ರಾಜಕೀಯ ಪಿತ್ತೂರಿಯಿಂದ ಮಾಡಲಾಗಿರುವ ಆರೋಪವಾಗಿರುತ್ತದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.