ಸುರತ್ಕಲ್: ಬೀದಿಬದಿ ವ್ಯಾಪಾರಸ್ಥರ ವಲಯ ಸಮಾವೇಶ
ಸುರತ್ಕಲ್: ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸುರತ್ಕಲ್ ವಲಯ ಮಟ್ಟದ ಬೀದಿಬದಿ ವ್ಯಾಪಾರಿಗಳ ಸಮಾವೇಶವು ಶನಿವಾರ ಸುರತ್ಕಲ್ ನಗರದ ಕರ್ನಾಟಕ ಸೇವಾ ವೃಂದದ ವೇದಿಕೆಯಲ್ಲಿ ಜರಗಿತು.
ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಸಮಾವೇಶ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಬೀದಿ ವ್ಯಾಪಾರಿಗಳ ಬದುಕುವ ಹಕ್ಕಿನ ಮೇಲೆ ದಾಳಿ ಮಾಡಲಾಗಿದೆ. ದೂರದೃಷ್ಟಿತ್ವದ ಯೋಜನೆ, ಯೋಚನೆಗಳಿಲ್ಲದೆ ಟೈಗರ್ ಕಾರ್ಯಾಚರಣೆ ನಡೆಸಲಾಗಿದೆ. ಬೀದಿ ವ್ಯಾಪಾರ ವಲಯ ಘೋಷಣೆ ಮಾಡುವಾಗ ಬೀದಿ ವ್ಯಾಪಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಅವೈಜ್ಞಾನಿಕವಾಗಿ ವಲಯ ಸ್ಥಾಪನೆಗೆ ಮುಂದಾಗಿದ್ದಾರೆ ಎಂದು ದೂರಿದರು.
ಸುರತ್ಕಲ್ ವಲಯ ವ್ಯಾಪ್ತಿಯಲ್ಲಿ 100ಕ್ಕೂ ಅಧಿಕ ಬೀದಿ ವ್ಯಾಪಾರಿಗಳಿದ್ದಾರೆ. ಅವರಿಗಾಗಿ ಮಹಾನಗರ ಪಾಲಿಕೆಯ ಸುರತ್ಕಲ್ ವಲಯ -1 ಆಯುಕ್ತರ ಅಧ್ಯಕ್ಷತೆಯಲ್ಲಿ ಪಟ್ಟಣ ವ್ಯಾಪಾರ ಸಮಿತಿ ರಚನೆ ಮಾಡಬೇಕೆಂದು ಆಗ್ರಹಿಸಿದ ಅವರು, ಟೈಗರ್ ಕಾರ್ಯಾಚರಣೆಯಲ್ಲಿ ವಶಪಡಿಸಲಾದ ಸರಕನ್ನು ಹಿಂದಿರುಗಿಸಬೇಕು. ಹಾನಿಗೊಳಗಾದ ವಸ್ತುಗಳಿಗೆ ಪರಿಹಾರ ನೀಡಿ ಸಮರ್ಪಕ ಬೀದಿ ವ್ಯಾಪಾರ ವಲಯ ರಚನೆ ಆಗುವವರೆಗೆ ಯಥಾಸ್ಥಿತಿ ವ್ಯಾಪಾರ ಮಾಡಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಸಂಘದ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಆರ್ ಎಸ್ , ಅಧ್ಯಕ್ಷರಾದ ಮುಜಾಫರ್ ಅಹ್ಮದ್ ಮಾತನಾಡಿ ದರು. ಸಂಘದ ಹಿರಿಯ ಸದಸ್ಯರಾದ ಧನಂಜಯ ಸುರತ್ಕಲ್ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ವಿಜಯ್, ಭಾಸ್ಕರ್ ತಡಂಬೈಲ್, ಶೈಲಾ ಸಿಕ್ವೇರಾ, ಫೆಲಿಕ್ಸ್ ನಝ್ರತ್, ಸಲಾಂ ಜನತಾಕಾಲನಿ, ಅಝೀಝ್ ಕೃಷ್ಣಾಪುರ, ಬಾಲಕೃಷ್ಣ, ಮೊಯ್ದಿನ್ ಎಂ. ಎಸ್. ಬೈಕಂಪಾಡಿ, ಹರೀಶ್ ಬೈಕಂಪಾಡಿ, ಯಲ್ಲನ ಗೌಡ ಮುಂತಾ ದವರು ಉಪಸ್ಥಿತರಿದ್ದರು. ಹನೀಫ್ ಇಡ್ಯಾ ಸ್ವಾಗತಿಸಿ, ವಂದಿಸಿದರು.