ತಲಪಾಡಿ ಗ್ರಾಮ ಸಭೆ: ಮೂಲಭೂತ ಸೌಕರ್ಯಗಳ ಕೊರತೆಗಳನ್ನು ಪ್ರಸ್ತಾಪಿಸಿದ ಗ್ರಾಮಸ್ಥರು
ಉಳ್ಳಾಲ: ತಲಪಾಡಿ ಗ್ರಾಮ ಪಂಚಾಯತ್ ಇದರ ಗ್ರಾಮ ಸಭೆಯು ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅಜಾದ್ ಸಭಾಂಗಣದಲ್ಲಿ ಗುರುವಾರ ತಲಪಾಡಿ ಗ್ರಾ.ಪಂ.ಅಧ್ಯಕ್ಷ ಟಿ. ಇಸ್ಮಾಯಿಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
2023-24ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯಲ್ಲಿ ಜಲಜೀವನ್ ಯೋಜನೆ ಕಳಪೆ ಕಾಮಗಾರಿ, ಕುಡಿಯುವ ನೀರು, ಬೀದಿ ನಾಯಿಗಳ ಕಾಟ, ತ್ಯಾಜ್ಯ ವಿಲೇವಾರಿ, ಶೌಚಾಲಯ, ಸರ್ಕಾರಿ ಬಸ್ ಗಳ ಬೇಡಿಕೆ ಮುಂತಾದ ಮೂಲಭೂತ ಸೌಕರ್ಯಗಳ ಕೊರತೆಗಳನ್ನು ಗ್ರಾಮಸ್ಥರು ಪ್ರಸ್ತಾಪಿಸಿದರು.
ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲು 59 ಸೆನ್ಸ್ ಜಾಗ ಮೀಸಲಿಟ್ಟು ಈ ಬಗ್ಗೆ ಜಿಲ್ಲಾಡಳಿತ ಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಿದ್ದೆವು. ಇದಕ್ಕೆ ಸ್ಥಳೀಯರ ಆಕ್ಷೇಪ ಬಂದ ಕಾರಣ ಸ್ಥಗಿತ ಆಗಿತ್ತು. ಸರ್ಕಾರಿ ಜಾಗದಲ್ಲಿ ಕೃಷಿ ಭೂಮಿ, ಮನೆ ನಿರ್ಮಾಣಕ್ಕೆ ಹಕ್ಕು ಪತ್ರ ನೀಡಿದ ಕಾರಣ ಸರಿಯಾದ ಜಾಗ ಸಿಕ್ಕಿಲ್ಲ. ತ್ಯಾಜ್ಯ ಘಟಕಕ್ಕೆ ಜಾಗ ಒದಗಿಸಲು ಕಂದಾಯ ಇಲಾಖೆಗೆ ಮನವಿ ಮಾಡಿದ್ದೇವೆ.ಇದಕ್ಕಾಗಿ 35 ಲಕ್ಷ ಮೀಸಲಿಡಲಾಗಿದೆ ಎಂದು ಪಿಡಿಒ ಕೇಶವ ಅವರು ಹೇಳಿದರು.
ಗ್ರಾಮದ ಎಲ್ಲಾ ಕಡೆಗಳಿಗೆ ಕುಡಿಯುವ ನೀರು ಒದಗಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ಇಸ್ಮಾಯಿಲ್ ಅವರು ಟ್ಯಾಂಕರ್ ಮೂಲಕ ಕುಡಿಯುವ ನೀರು ಒದಗಿಸಲಾಗುವುದು ಎಂದರು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಭರವಸೆ ಬೇಕಾಗಿಲ್ಲ. ಶಾಶ್ವತ ಕುಡಿಯುವ ನೀರು ಕೊಡಿ. ಅದಕ್ಕೆ ಮಳೆಗಾಲ, ಬೇಸಿಗೆ ಕಾಲ ಎಂದು ವಿಂಗಡಿಸುವುದು ಯಾಕೆ ಎಂದು ಪ್ರಶ್ನಿಸಿದರು.
ಜಲಜೀವನ್ ಯೋಜನೆಯಡಿ ತಲಪಾಡಿ ಪಂಚಾಯತ್ ಬಳಿ ನಿರ್ಮಿಸಲಾದ 25,000 ಲೀಟರ್ ಪ್ರಮಾಣದ ನೀರಿನ ಟ್ಯಾಂಕ್ ಕಳಪೆ ಕಾಮಗಾರಿ ಯಿಂದ ಕೂಡಿದೆ. ಮರಳು ಬಳಸದೇ ಕೇವಲ ಜಲ್ಲಿ ಪುಡಿ ಬಳಸಿ ನಿರ್ಮಿಸಲಾಗಿದೆ ಎಂದು ಆರೋಪಿಸಿದ ಗ್ರಾಮಸ್ಥರು ಜಲಜೀವನ್ ಯೋಜನೆ ಯ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಣ್ಣ ಅವರನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಶಿವಣ್ಣ ಅವರು ಟ್ಯಾಂಕ್ ನಿರ್ಮಾಣ ಹಂತದಲ್ಲಿದೆ , ಪೂರ್ಣಗೊಂಡ ಬಳಿಕ ಬೋರ್ಡ್ ಅಳವಡಿಸಲಾಗುವುದು ಎಂದು ಉತ್ತರಿಸಿದರು.
ಈ ವೇಳೆ ಆಕ್ರೋಶ ಗೊಂಡ ಗ್ರಾಮಸ್ಥರು, 4.36 ಕೋಟಿ ಜಲಜೀವನ್ ಯೋಜನೆಯಡಿ ತಲಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿ ಆಗುತ್ತದೆ. ಇದನ್ನು ವ್ಯರ್ಥ ಮಾಡಲು ಬಿಡುವುದಿಲ್ಲ. ಗುತ್ತಿಗೆದಾರರಿಗೆ ಹಣ ಪಾವತಿ ಮಾಡಬಾರದು. ಟ್ಯಾಂಕ್ ಯಾವ ಮಟ್ಟದಲ್ಲಿದೆ ಎಂದು ಜೊತೆಯಾಗಿ ಪರಿಶೀಲನೆ ಮಾಡೋಣ ಎಂದು ಪಟ್ಟು ಹಿಡಿದರು.
ಬೀದಿ ನಾಯಿಗಳ ಕಾಟದ ಬಗ್ಗೆ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆಯಿತು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಕೇಶವ ಅವರು, ನಾಯಿಯನ್ನು ಕೊಲ್ಲುವಂತಿಲ್ಲ. ಇದನ್ನು ಜಾಗೃತಿಗೊಳಿಸುವುದು ಸಾಕುವವರ ಜವಾಬ್ದಾರಿ. ಬೀದಿ ನಾಯಿಗಳನ್ನು ಬೇರೆ ಕಡೆ ಸ್ಥಳಾಂತರ ಮಾಡುವ ಕಾರ್ಯ ಮಾಡುತ್ತೇವೆ ಎಂದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ನಾಯಿಗಳ ಕಾಟ ಮಧ್ಯರಾತ್ರಿ ಆರಂಭ ಆಗುತ್ತದೆ. ನಾಯಿಯಿಂದ ತೊಂದರೆ ಆದಲ್ಲಿ ನಾವೇ ನಾಯಿಗಳನ್ನು ಪಂಚಾಯತ್, ಪಶು ಸಂಗೋಪನಾ ಕಚೇರಿ ಬಳಿ ಕಟ್ಟಿ ಹಾಕುತ್ತೇವೆ ಎಂದು ಎಚ್ಚರಿಸಿದರು.
ತರಕಾರಿ ಮಾರುಕಟ್ಟೆ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪಿಸಿದ ಸದಸ್ಯರು, ಇತ್ತೀಚೆಗೆ ಮಾಡಲಾದ ಮೀನು ಮಾರುಕಟ್ಟೆ ಪಾಳು ಬಿದ್ದಿದೆ. ಮೀನು ಮಾರುವವರು ಬೇರೆ ಕಡೆ ಮಾರುತ್ತಿದ್ದಾರೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ತಾ.ಪಂ. ಸದಸ್ಯೆ ಸುರೇಖಾ ಅವರು, ಪಾಳು ಬಿದ್ದ ಮೀನು ಮಾರುಕಟ್ಟೆ ಯನ್ನು ತರಕಾರಿ ಮಾರುಕಟ್ಟೆ ಮಾಡಿ ಎಂದು ಸಲಹೆ ನೀಡಿದರು.
ಸರ್ಕಾರದ ಶಕ್ತಿ ಯೋಜನೆಯಿಂದ ತಲಪಾಡಿಯ ಮಹಿಳೆಯರು ವಂಚಿತರಾಗುತ್ತಿದ್ದಾರೆ. ಇಲ್ಲಿಗೆ ಸರ್ಕಾರಿ ಬಸ್ ಒದಗಿಸಬೇಕು ಎಂದು ಕೆಎಸ್ಸಾರ್ಟಿಸಿ ಇಲಾಖೆ ಅಧಿಕಾರಿಯನ್ನು ಮಹಿಳಾ ಗ್ರಾಮಸ್ಥರು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಕೆಎಸ್ಸಾರ್ಟಿಸಿ ಅಧಿಕಾರಿಯವರು ಎಪ್ರಿಲ್ ತಿಂಗಳಲ್ಲಿ ಹೊಸ ಬಸ್ ಬರುತ್ತವೆ. ಈ ವೇಳೆ ನಿಮ್ಮ ಮನವಿಗೆ ಸ್ಪಂದಿಸಬಹುದು ಎಂದು ಭರವಸೆ ನೀಡಿದರು. ತಲಪಾಡಿಗೆ ಐದು ಸರ್ಕಾರಿ ಬಸ್ ಒದಗಿಸುವಂತೆ ಮಹಿಳಾ ಗ್ರಾಮಸ್ಥರು ಒತ್ತಾಯಿಸಿದರು.
ಮಂಗಳೂರು ಉತ್ತರ ಕ್ಷೇತ್ರದ ಶಿಕ್ಷಣ ಇಲಾಖೆಯ ಬಿ.ಆರ್.ಸಿ ರಮೇಶ್ ನೋಡಲ್ ಅಧಿಕಾರಿ ಆಗಿದ್ದರು. ಗ್ರಾಮ ಸಭೆಯಲ್ಲಿ ಉಪಾಧ್ಯಕ್ಷೆ ಪುಷ್ಪಾವತಿ, ಪಿಡಿಒ ಕೇಶವ, ಶಿಕ್ಷಣ ಇಲಾಖೆ ಸಮೂಹ ಸಂಪನ್ಮೂಲ ವ್ಯಕ್ತಿ ಹರೀಶ್, ಸಹಾಯಕ ಇಂಜಿನಿಯರ್ ಶಿವಣ್ಣ, ಗ್ರಾಮ ಪಂಚಾಯಿತಿ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಪಿಡಿಒ ಕೇಶವ ಸ್ವಾಗತಿಸಿದರು. ಕಾರ್ಯದರ್ಶಿ ಲಲಿತಾ ಶೆಟ್ಟಿ ನಾಡವಳಿ ವರದಿ ಮಂಡನೆ ಮಾಡಿದರು.