ತಲಪಾಡಿ : ಕೊಳದಲ್ಲಿ ಮುಳುಗಿ ಯುವಕ ಮೃತ್ಯು; ಪ್ರಕರಣ ದಾಖಲು
ತಲಪಾಡಿ : ಯುವಕನೋರ್ವ ಕೊಳದಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾದ ಘಟನೆ ತಲಪಾಡಿ ನಿಸರ್ಗ ಬಾರ್ ಬಳಿ ನಡೆದಿದ್ದು, ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದುರ್ಗಿಪಳ್ಳ ನಿವಾಸಿ ಹರೀಶ ಯಾನೆ ಹರಿ ಪ್ರಸಾದ್ ಆಚಾರ್ಯ (36) ಮೃತರು ಎಂದು ಗುರುತಿಸಲಾಗಿದೆ.
ಅವಿವಾಹಿತರಾಗಿದ್ದ ಹರಿ ಪ್ರಸಾದ್ ವೆಲ್ಡಿಂಗ್ ವೃತ್ತಿ ಮಾಡುತ್ತಿದ್ದರು. ಕುಡಿತದ ಚಟ ಹೊಂದಿದ್ದ ಅವರು ಕಳೆದ ನಾಲ್ಕು ದಿವಸಗಳಿಂದ ಮನೆಗೆ ಹೋಗಿರಲಿಲ್ಲ ಎಂದು ತಿಳಿದುಬಂದಿದೆ.
ಹರಿಪ್ರಸಾದ್ ಅವರು ಯುವರಾಜ್ ಯಾನೆ ಮುನ್ನ, ಲೋಹಿತ್, ನವೀನ್ ದೇವಾಡಿಗ, ನಿತೇಶ್ ಉಚ್ಚಿಲ್ ಎಂಬವರೊಂದಿಗೆ ಸಮೀಪದ ಖಾಸಗಿ ಲೇ ಔಟ್ ನಲ್ಲಿರುವ ಕೊಳದಲ್ಲಿ ಸ್ನಾನಕ್ಕೆ ತೆರಳಿದ್ದು, ಈ ವೇಳೆ ಈಜು ತಿಳಿಯದ ಹರಿ ಪ್ರಸಾದ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ದೂರಲಾಗಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಉಳ್ಳಾಲ ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾಣಿಸಿದ್ದಾರೆ.
ಈ ಬಗ್ಗೆ ಪರಿಶೀಲನೆ ನಡೆಸಿದ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.