ಶಿಕ್ಷಕರು, ಪದವೀಧರರು ಕಾಂಗ್ರೆಸ್‌ನ ಋಣ ತೀರಿಸಿ: ಡಾ. ಕುಬೇರಪ್ಪ
ಮಂಗಳೂರು, ಮೇ 22: ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ರಾಜ್ಯದ ಶಿಕ್ಷಕರು ಮತ್ತು ಪದವೀಧರರಿಗೆ ಅನೇಕ ಸೌಲಭ್ಯಗಳನ್ನು ನೀಡಿರುವುದರಿಂದ ವಿಧಾನಪರಿಷತ್ ಚುನಾವಣೆಯಲ್ಲಿ ಶಿಕ್ಷಕರು ಮತ್ತು ಪದವೀಧರರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಋಣ ತೀರಿಸುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪದವೀಧರ ಘಟಕದ ರಾಜ್ಯಾಧ್ಯಕ್ಷ ಡಾ. ಆರ್.ಎಂ. ಕುಬೇರಪ್ಪ ಮನವಿ ಮಾಡಿದ್ದಾರೆ.
ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆರನೇ ವೇತನ ಆಯೋಗದ ಎಲ್ಲಾ ಸಿಫಾರಸ್ಸುಗಳನ್ನು ಯಥಾವತ್ತಾಗಿ ಆಗಿನ ಮುಖ್ಯಮಂತ್ರಿ ಸಿದ್ದ್ಧರಾಮಯ್ಯನವರು ಜಾರಿಗೊಳಿಸಿದ್ದರಿಂದ, ಕನಿಷ್ಠ ಹತ್ತು ಸಾವಿರದಿಂದ ಇಪ್ಪತ್ತು ಸಾವಿರದ ವರೆಗೆ ಲಾಭವಾಗಿದೆ. ಅವರ ಹಿಂದಿನ ಅವಧಿಯಲ್ಲಿ ಲಕ್ಷಗಟ್ಟಲೇ ಉದ್ಯೋಗಗಳನ್ನು ಸೃಷ್ಟಿಸಿ ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ನೀಡಿದ್ದಾರೆ. 25 ವರ್ಷಗಳಿಂದ ರಾಜ್ಯದ ಅನುದಾನಿತ ಪದವಿ ಕಾಲೇಜುಗಳಲ್ಲಿ ಖಾಲಿಯಾದ ಹುದ್ದೆಗಳನ್ನು ತುಂಬಲು ಅನುಮತಿ ನೀಡಿದ್ದರಿಂದ ಪಿಎಚ್‌ಡಿ ಪಡೆದು ನಿರುದ್ಯೋಗಿಯಾದ ಸಾವಿರಾರು ಯುವಕರಿಗೆ ಉದ್ಯೋಗದ ಅವಕಾಶಗಳನ್ನು ನೀಡಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಸರಕಾರ ನೀಡಿದ ಪಂಚ ಗ್ಯಾರಂಟಿಗಳಲ್ಲಿ ನಿರುದ್ಯೋಗ ಪದವೀಧರ ಯುವಕ ಮತ್ತು ಯುವತಿಯರಿಗೆ 3,000 ರೂ., ಡಿಪ್ಲೋಮಾ ಪದವೀಧರರಿಗೆ ತಿಂಗಳಿಗೆ 1,500 ರೂ. ನಗದು ಹಣ ತಿಂಗಳು ನೀಡುತ್ತಿದ್ದಾರೆ. ಇತ್ತೀಚಿಗೆ ಅತಿಥಿ ಉಪನ್ಯಾಸಕರು ಮಾಡಿದ ಹೋರಾಟಕ್ಕೆ ಸ್ಪಂದಿಸಿದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಸರಕಾರವು ಸರಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ಅತಿಥಿ ಉಪನ್ಯಾಸಕರಿಗೆ ಅವರ ವೇತನವನ್ನು ತಿಂಗಳಿಗೆ ಕನಿಷ್ಠ ರೂ. 38 ಸಾವಿರದಿಂದ 42 ಸಾವಿರದವರೆಗೆ ಹೆಚ್ಚಿಸಿದೆ. ಅಲ್ಲದೆ ಅವರಿಗೆ ಆರೋಗ್ಯ ವಿಮೆ, ನಿವೃತ್ತಿ ಹೊಂದುವಾಗ ಪ್ರತಿಯೊಬ್ಬರಿಗೂ 5 ಲಕ್ಷ ರೂ.ಇಡಿಗಂಟು ಹಣ ನೀಡುವುದಾಗಿ ಆದೇಶ ಮಾಡಲಾಗಿದೆ. ಈಗಾಗಲೇ ಏಳನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಮಧ್ಯಂತರ ಪರಿಹಾರವನ್ನು ಘೋಷಿಸಿದ್ದು ಅತೀ ಶೀಘ್ರದಲ್ಲೇ 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಸರಕಾರ ಜಾರಿ ಮಾಡಲಿದೆ. ರಾಜ್ಯದ ಎಲ್ಲಾ ಅನುದಾನಿತ ಶಾಲಾ ಕಾಲೇಜುಗಳಲ್ಲಿ ನಿವೃತ್ತಿ ಅಥವಾ ನಿಧನದಿಂದ ಖಾಲಿಯಾದ ಶಿಕ್ಷಕರ ಹುದ್ದೆಗಳನ್ನು 2015ರ ವರೆಗೆ ತುಂಬಲಾಗಿದೆ ಎಂದು ಮಾಹಿತಿ ನೀಡಿದರು.
2023 ರ ಚುನಾವಣಾ ಪ್ರಣಾಳಿಕೆಯಲ್ಲಿ ರಾಜ್ಯದ ಅನುದಾನರಹಿತ ಶಾಲಾ ಕಾಲೇಜುಗಳನ್ನು ಆದ್ಯತೆ ಮೇರೆಗೆ ಹಂತ-ಹಂತವಾಗಿ ಅನುದಾನಕ್ಕೊಳಪಡಿಸುವ ಭರವಸೆ ನೀಡಲಾಗಿದೆ. ವಿಧಾನ ಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ. ಪದವೀಧರರು ಮತ್ತು ಶಿಕ್ಷಕರು ಅತ್ಯಂತ ಪ್ರಾಮಾಣಿಕವಾಗಿ ಸ್ಪಂದಿಸಿ. ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಾ.ಮಂಜುನಾಥ್‌ರಿಗೆ ಮತ ನೀಡುವಂತೆ ಕುಬೇರಪ್ಪ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಹಾವೇರಿ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಶಂಕರ್ ಎಂ, ದ.ಕ.ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರಜ್‌ಪಾಲ್, ಪ್ರಮುಖರಾದ ಶುಭೋದಯ ಆಳ್ವ, ಎಲಿಸ್ಟರ್, ನಝೀರ್ ಬಜಾಲ್ ಉಪಸ್ಥಿತರಿದ್ದರು.