ರೈತ ಕಾರ್ಮಿಕರ ಬದುಕನ್ನು ವಿನಾಶದ ಅಂಚಿಗೆ ತಳ್ಳಿದ ಕೇಂದ್ರ ಸರಕಾರ ತೊಲಗಲಿ: ಕೃಷ್ಣಪ್ಪ ಸಾಲಿಯಾನ್
ಮಂಗಳೂರು: ಇಡೀ ದೇಶಕ್ಕೆ ಅನ್ನ ನೀಡುವ ರೈತಾಪಿ ಜನತೆ ತೀವ್ರ ಸಂಕಷ್ಟದಲ್ಲಿದ್ದಾರೆ. ಅವರು ಬೆಳೆಸುವ ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ಕೇಂದ್ರ ಸರ್ಕಾರ ತಯಾರಿಲ್ಲ. ಇದರಿಂದ ಕೃಷಿ ರಂಗ ತೀವ್ರ ಬಿಕ್ಕಟ್ಟಿಗೆ ಸಿಲುಕಿದ್ದು,ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದೆ.ಒಂದೆಡೆ ಕೃಷಿ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದ್ದು,ಮತ್ತೊಂದೆಡೆ ರೈತರ ಭೂಮಿ ಯನ್ನು ಬಲವಂತದಿಂದ ಕಿತ್ತುಕೊಂಡು ಕಾರ್ಪೊರೇಟ್ ಕಂಪೆನಿಗಳಿಗೆ ನೀಡಲಾಗುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷರಾದ ಕೃಷ್ಣಪ್ಪ ಸಾಲಿಯಾನ್ ರವರು ಸೇರಿದ್ದ ಜನತೆಗೆ ಎಚ್ಚರಿಕೆ ನೀಡಿದ್ದಾರೆ.
ಅವರು ದೇಶದ ಸ್ವಾತಂತ್ರ್ಯ ಪ್ರಜಾಪ್ರಭುತ್ವ ಸಂವಿಧಾನದ ರಕ್ಷಣೆಗಾಗಿ ದೇಶಾದ್ಯಂತ ಕಾರ್ಮಿಕ ವರ್ಗ ನಡೆಸುತ್ತಿರುವ ವ್ಯಾಪಕ ಪ್ರಚಾರಾಂದೋಲನದ ಭಾಗವಾಗಿ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಜರುಗಿದ ಉಳ್ಳಾಲ ತಾಲೂಕು ಮಟ್ಟದ ಎರಡು ದಿನಗಳ ವಾಹನ ಪ್ರಚಾರ ಜಾಥಾದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸ್ವಾಮಿನಾಥನ್ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಆಸಕ್ತಿ ತೋರುತ್ತಿಲ್ಲ. ಮಾತ್ರವಲ್ಲದೆ ಕಾರ್ಮಿಕರ ಬದುಕನ್ನು ಮೂರಾಬಟ್ಟೆಯನ್ನಾಗಿಸಿ ಅವರ ಬದುಕನ್ನು ಸರ್ವನಾಶಗೊಳಿಸಿದೆ. ಒಟ್ಟಿನಲ್ಲಿ ರೈತ ಕಾರ್ಮಿಕರ ಬದುಕನ್ನು ವಿನಾಶದ ಅಂಚಿಗೆ ತಳ್ಳಿದ ಈ ಕೇಂದ್ರ ಸರಕಾರ ತೊಲಗದಿದ್ದಲ್ಲಿ ದೇಶದ ಸ್ವಾತಂತ್ರ್ಯ ಪ್ರಜಾಪ್ರಭುತ್ವ ಸಮಗ್ರತೆಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ ದೇಶದ ಸಂಪತ್ತನ್ನು ಸೃಷ್ಠಿಸುವ ಕಾರ್ಮಿಕರನ್ನು ಗುತ್ತಿಗೆ ಹೊರಗುತ್ತಿಗೆ ಇನ್ನಿತರ ಹೆಸರಿನಲ್ಲಿ ದುಡಿಸಿ,ಅವರನ್ನು ಮತ್ತೆ ಗುಲಾಮರನ್ನಾಗಿಸುವ, ಜೀತದಾಳುಗಳನ್ನಾಗಿಸುವ ಪ್ರಕ್ರಿಯೆ ವ್ಯಾಪಕವಾಗಿ ನಡೆಯುತ್ತಿದೆ.ನೂರಾರು ವಿಭಾಗದ ಕಾರ್ಮಿ ಕರು ಸೇರಿದಂತೆ ೩೯ ಕೋಟಿಗೂ ಮಿಕ್ಕಿದ ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗೆ ಯಾವುದೇ ಸಾಮಾಜಿಕ ಭದ್ರತೆಯಿಲ್ಲ. ಹಗಲಿಡೀ ದುಡಿದರೂ ಸಿಗುವ ನಿಕೃಷ್ಟ ಕೂಲಿಗೆ ಜೀವನ ಸಾಗಿಸಲು ಸಾಧ್ಯವಿಲ್ಲ. ವಿಪರೀತ ಬೆಲೆಯೇರಿಕೆಯಿಂದಾಗಿ ಕಾರ್ಮಿಕ ವರ್ಗ ತತ್ತರಿಸಿದೆ ಎಂದು ಹೇಳಿದರು.
ಸಭೆಯನ್ನುದ್ದೇಶಿಸಿ ಸಿಐಟಿಯು ಜಿಲ್ಲಾ ನಾಯಕರಾದ ಸುಕುಮಾರ್ ತೊಕ್ಕೊಟ್ಟು,ಜಯಂತ ನಾಯಕ್ ರವರು ಮಾತನಾಡಿ ದರು. ಜಾಥಾದ ನೇತೃತ್ವವನ್ನು ಸಿಐಟಿಯು ನಾಯಕರಾದ ಸುಂದರ ಕುಂಪಲ, ರೋಹಿದಾಸ್ ಭಟ್ನಗರ,ಪದ್ಮಾವತಿ ಶೆಟ್ಟಿಯವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಿಐಟಿಯು ಮುಖಂಡರಾದ ಜನಾರ್ದನ ಕುತ್ತಾರ್,ಚಂದ್ರಹಾಸ ಪಿಲಾರ್, ವಿಲಾಸಿನಿ ತೊಕ್ಕೊಟ್ಟು,ಬಾಬು ಪಿಲಾರ್,ಹರಿಣಾಕ್ಷಿ,ನಾರಾಯಣ ತಲಪಾಡಿ,ವಿಶ್ವನಾಥ್ ಕೊಂಡಾಣ,ರಿಕ್ಷಾ ಚಾಲಕರ ಮುಖಂಡರಾದ ದಯಾನಂದ, ನಝೀರ್,ಪುರಂದರ,ಮೆಲ್ವಿನ್ ಮುಂತಾದವರು ಉಪಸ್ಥಿತರಿದ್ದರು.