ಕರಾವಳಿಯ ಕಡಲ್ಕೊರೆತ ಸಮಸ್ಯೆಗೆ ಸಿಗದ ಮುಕ್ತಿ: ಮರೀಚಿಕೆಯಾದ ಶಾಶ್ವತ ಪರಿಹಾರ
ಫೈಲ್ ಫೋಟೊ
ಮಂಗಳೂರು: ಹಲವು ದಶಕಗಳಿಂದ ಕಾಡುತ್ತಿರುವ ಕರಾವಳಿಯ ಅದರಲ್ಲೂ ಉಳ್ಳಾಲದ ಕಡಲ್ಕೊರೆತ ಸಮಸ್ಯೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಶಾಶ್ವತ ಪರಿಹಾರವು ಮರೀಚಿಕೆಯಾಗಿದೆ. ಅದರಲ್ಲೂ ಗಾಳಿ, ಮಳೆ ಬಿರುಸು ಪಡೆಯುತ್ತಲೇ ಕಡಲ ತೀರದ ಜನರ ಕೂಗು ಮತ್ತೆ ಕೇಳಿ ಬರುತ್ತಿವೆ.
ಉಳ್ಳಾಲ ತಾಲೂಕಿನ ಬಟ್ಟಪ್ಪಾಡಿ, ಮೊಗವೀರ ಪಟ್ಣ, ಸೀಗ್ರೌಂಡ್, ನ್ಯೂ ಉಚ್ಚಿಲ, ಕೋಟೆಪುರ, ಮಂಗಳೂರು ತಾಲೂಕಿನ ಬೈಕಂಪಾಡಿ, ಮೀನಕಳಿಯ, ಸಸಿಹಿತ್ಲು ಪ್ರದೇಶಗಳಲ್ಲಿ ಕಡಲ್ಕೊರೆತದ ಸಮಸ್ಯೆ ಜೀವಂತವಾಗಿವೆ. ಬಿರುಸಿನ ಮಳೆ ಮತ್ತು ಕಡಲು ಅಬ್ಬರಿಸಿದಾಗ ಈ ಸಮಸ್ಯೆಯ ಪರಿಹಾರಕ್ಕೆ ಜನಪ್ರತಿನಿಧಿಗಳ, ಅಧಿಕಾರಿಗಳು ನೀಡುವ ಭರವಸೆಯು ಮಳೆ ಮುಗಿಯುತ್ತಲೇ ಮರೆಮಾಚಲ್ಪಡುತ್ತಿವೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಕಡಲತೀರದಲ್ಲಿ ವಾಸವಾಗಿರುವ ಒಬ್ಬೊಬ್ಬರದ್ದು ಒಂದೊಂದು ಕತೆ. ಇದು ಇಂದು ನಿನ್ನೆಯ ಸಮಸ್ಯೆಯಲ್ಲ. ಸುಮಾರು 35 ವರ್ಷದಿಂದ ಈ ಸಮಸ್ಯೆಯಿದೆ. ಸುಮಾರು ಒಂದು ಕಿ.ಮೀ.ನಷ್ಟು ಭೂ ಪ್ರದೇಶವನ್ನು ಕಡಲು ನುಂಗಿದೆ. ಅಲ್ಲಿದ್ದ ಅಂಗಡಿ, ಮನೆ, ತೆಂಗಿನ ಮರ ಇತ್ಯಾದಿಯನ್ನು ಕಡಲು ಆಹುತಿ ಪಡೆದಿದೆ. ಇದಕ್ಕೆ ಇಲ್ಲಿ ಬ್ರೇಕ್ ವಾಟರ್ ಅಳವಡಿಸಿದ್ದೇ ಕಾರಣ ಎಂದೂ ಕೆಲವರು ಆರೋಪಿಸುತ್ತಾರೆ.
ಬೈಕಂಪಾಡಿಯ ಮೀನಕಳಿಯಲ್ಲಿ ಜಂಬೊ ಬ್ಯಾಗ್ಗಳನ್ನು ಇಡಲಾಗಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ೨೫ ಕೋ.ರೂ. ವೆಚ್ಚದ ತಡೆಗೋಡೆ ನಿರ್ಮಾಣದ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ ಅದೀಗ ನನೆಗುದಿಗೆ ಬಿದ್ದಿದೆ ಎಂದು ಹೇಳಲಾಗುತ್ತದೆ.
*ಸುರತ್ಕಲ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್ಐಟಿಕೆ)ಯ ಪ್ರೊ. ಕಿರಣ್ ಶ್ರೀಲಾಲ್ ನೇತೃತ್ವದ ತಜ್ಞರ ತಂಡವು ಕಡಲ್ಕೊರೆತ ಪ್ರದೇಶದ ಅಧ್ಯಯನ ನಡೆಸಿತ್ತು. ಶಾರ್ಟ್ ಟಿ ಗ್ರೊಯನ್ಸ್ ಮಾದರಿಯು ಕಡಲ್ಕೊರೆತ ತಡೆಗೆ ಸಹಕಾರಿಯಾಗಲಿದೆ. ಅಂದರೆ ಕಡಲ ತಳಭಾಗವು ಒಂದೇ ರೀತಿ ಇರುವುದಿಲ್ಲ. ಹಾಗಾಗಿ ತೀರ ಪ್ರದೇಶದಲ್ಲಿ ನೀರಿನ ಆಳವೂ ಬೇರೆ ಬೇರೆಯಾಗಿರುತ್ತದೆ. ಅಲೆಗಳ ಶಕ್ತಿ ಸಂಚಯವು ಅಲೆಗಳ ದಿಕ್ಕು ಬದಲಾಗುವುದಕ್ಕೆ ಕಾರಣವಾಗಿದೆ. ಹಾಗಾಗಿ ಅಲೆಗಳ ಶಕ್ತಿ ಸಂಚಯಕ್ಕೆ ಅನುಗುಣವಾಗಿ ಕಡಲ್ಕೊರೆತದ ತೀವ್ರತೆಯು ಬದಲಾಗುತ್ತದೆ. ಕಡಲ ತೀರದ ಭೌಗೋಳಿಕ ವಾತಾವರಣ ವಿಭಿನ್ನವಾಗಿರುತ್ತದೆ. ಆಯಾ ಪ್ರದೇಶದ ಅಧ್ಯಯನ ನಡೆಸಿ, ಹೊಂದಿಕೆಯಾಗುವ ಮಾದರಿ ಯನ್ನು ರೂಪಿಸಬೇಕಾಗುತ್ತದೆ. ವಿದೇಶದಲ್ಲಿ ಈ ಮಾದರಿ ಬಳಕೆಯಲ್ಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರೊ. ಕಿರಣ್ ಶ್ರೀಲಾಲ್ ನೇತೃತ್ವದ ತಜ್ಞರ ತಂಡದ ವರದಿಯನ್ನು ಆಧರಿಸಿ ಸರಕಾರಕ್ಕೆ 88 ಕೋ.ರೂ. ಮೊತ್ತದ ಪ್ರಸ್ತಾವ ಸಲ್ಲಿಸಲಾಗಿದೆ. ಉಳ್ಳಾಲದ ಬಟ್ಟಪ್ಪಾಡಿ, ಸೋಮೇಶ್ವರ, ಮೊಗವೀರ ಪಟ್ಣ, ಕುಳಾಯಿ, ಚಿತ್ರಾಪುರ, ಮೀನಕಳಿಯ, ಸಸಿ ಹಿತ್ಲು ಪ್ರದೇಶಗಳಲ್ಲಿ ಕಡಲ್ಕೊರತೆಕ್ಕೆ ಕಡಿವಾಣ ಹಾಕಲು ಸೂಚಿಸಲಾಗಿದೆ ಎಂದು ಇತ್ತೀಚೆಗೆ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿದ್ದ ಕರ್ನಾಟಕ ಬಂದರು ಮತ್ತು ಜಲಸಾರಿಗೆ ಇಲಾಖೆಯ ನಿರ್ದೇಶಕ ಕ್ಯಾಪ್ಟನ್ ಸಿ.ಸ್ವಾಮಿ ಮಾಹಿತಿ ನೀಡಿದ್ದರು.