ದೇಶದ ಅತೃಪ್ತ ಜನತೆ, ಸಮುದಾಯಗಳ ಸಮಸ್ಯೆಗೆ ಒತ್ತು ಅಗತ್ಯ: ಡಾ.ವೀರಪ್ಪ ಮೊಯ್ಲಿ
ವಿಚಾರ ಸಂಕಿರಣ, ಪುಸ್ತಕ ಬಿಡುಗಡೆ ಕಾರ್ಯಕ್ರಮ
ಮಂಗಳೂರು, ಸೆ.1: ದೇಶದಲ್ಲಿ ಪ್ರಸ್ತುತ ಅಸಂತೋಷ, ಅತೃಪ್ತಿ, ನೆಮ್ಮದಿ ಇಲ್ಲದ ಸ್ಥಿತಿ ನಿರ್ಮಾಣವಾಗಿದ್ದು, ನಾವು ಜ್ವಾಲಾಮುಖಿಯಲ್ಲಿ ಕುಳಿತಿರುವಂತೆ ಭಾಸವಾಗುತ್ತಿದೆ. ಅತೃಪ್ತ ಜನತೆ, ಸಮುದಾಯಗಳ ಸಮಸ್ಯೆಗಳ ಬಗ್ಗೆ ನಾವಿಂದು ಗಮನ ಹರಿಸಬೇಕಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಡಾ.ಎಂ. ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ, ವಿಶ್ವವಿದ್ಯಾನಿಲಯ ಕಾಲೇಜು, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ರಾಷ್ಟ್ರೀಯ ಸೇವಾ ಯೋಜನೆ, ಕಜೆಮಾರು ಕೆದಂಬಾಡಿ ಕುಂಬ್ರ ಜತ್ತಪ್ಪ ರೈ ಪ್ರತಿಷ್ಠಾನ ಸಹಭಾಗಿತ್ವದಲ್ಲಿ ಆಯೋಜಿಸಲಾದ ವಿಚಾರ ಸಂಕಿರಣ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸಕ್ತ ಸನ್ನಿವೇಶದಲ್ಲಿ ಸರಕಾರಕ್ಕಿಂತ ಮಿಲಿಟರಿ ಆಡಳಿತವೇ ಉತ್ತಮ ಭಾವನೆ ದೇಶದಲ್ಲಿ ನಿರ್ಮಾಣವಾಗಿದೆ. ಸಮಾಜದಲ್ಲಿ ಅಸಮಾನತೆ ಹೆಚ್ಚುತ್ತಿದ್ದು, ಇದಕ್ಕಾಗಿ ಮಹಾತ್ಮ ಗಾಂಧೀಜಿಯ ವಿಚಾರ ಹಾಗೂ ಕಮ್ಯುನಿಸ್ಟ್ ನಾಯಕ ದಿವಂಗತ ಕೃಷ್ಣ ಶೆಟ್ಟಿಯವರ ಆದರ್ಶಗಳನ್ನು ನೆರಳಾಗಿಸಿಕೊಂಡು ಹೋರಾಟ ನಡೆಸಬೇಕಾಗಿದೆ ಎಂದುಅವರು ಅಭಿಪ್ರಾಯಿಸಿದರು.
ತಮ್ಮ ರಾಜಕೀಯ ಜೀವನದಲ್ಲಿ ಕೃಷ್ಣ ಶೆಟ್ಟಿಯವರ ಪ್ರಭಾವ ಅಪಾರ ಎಂದು ಉಲ್ಲೇಖಿಸಿದ ವೀರಪ್ಪ ಮೊಯ್ಲಿ, ಹೋರಾಟ ಮನೋಭಾವನೆಯ ಎಡಪಂಥೀಯ ಚಿಂತನೆಗಳು ತನ್ನಲ್ಲಿ ಹುಟ್ಟುವಲ್ಲಿ ಅವರೇ ಪ್ರೇರಣೆ ಎಂದರು.
ಭೂ ಮಾಲಕರ ಕುಟುಂಬದಲ್ಲಿ ಜನಿಸಿದ್ದ ಕೃಷ್ಣ ಶೆಟ್ಟಿಯವರು ದೀನ ದಲಿತರು, ಶೋಷಣೆ, ದಬ್ಬಾಳಿಕೆಗೆ ಒಳಗಾಗಿದ್ದವರ ಧ್ವನಿಯಾಗಿ, ಸ್ವಾರ್ಥ, ಮತೀಯತೆ, ಜಾತೀಯತೆಯಿಂದ ದೂರ ಉಳಿದವರು. ತತ್ವಬದ್ಧರಾಗಿದ್ದು, ಕಳಂಕರಹಿತ ರಾಜಕಾರಣಿಯಾಗಿದ್ದ ಕೃಷ್ಣ ಶೆಟ್ಟಿ, ಕಾಲೇಜು ಸಮಯದಲ್ಲೇ ತಮಗೆ ಸ್ಪೂರ್ತಿಯಾಗಿದ್ದವರು ಎಂದು ವೀರಪ್ಪ ಮೊಯ್ಲಿ ನುಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯ, ಕೇರಳದ ಮಾಜಿ ಸಚಿವ ಎಂ.ಎ. ಬೇಬಿ ಅವರು ಮಾತನಾಡಿ, ಮಹಾತ್ಮ ಗಾಂಧೀಜಿಯವರ ಉದಾತ್ತ ಆಲೋಚನೆಗಳನ್ನು ಜನರ ಮಧ್ಯೆ ಕೊಂಡೊಯ್ಯುವ ಕಾರ್ಯವಿಂದು ನಡೆಯಬೇಕಾಗಿದೆ ಎಂದರು.
ಗಾಂಧಿಯನ್ನು ಓದದೆ ಟೀಕಿಸದಿರಿ
ಸಮಾಜದಲ್ಲಿ ನೆಮ್ಮದಿ, ಶಾಂತಿ, ಗೌರವ, ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗುವ ಶಾಂತಿಯುತ, ಅಹಿಂಸಾತ್ಮಕ ಸಮಾಜ ಹಾಗೂ ದೇಶದಲ್ಲಿ ಸಾವಿರಾರು ವರ್ಷಗಳಿಂದ ನೆಲೆ ನಿಂತಿರುವ ವೈವಿಧ್ಯಮಯ ಸಂಸ್ಕೃತಿಗಳು, ಸಮುದಾಯಗಳು, ಧರ್ಮೀಯರು ನಾವೆಲ್ಲರೂ ಒಂದು ಎಂಬ ಸಮುದಾಯಿಕ ಸಮಾಜದ ಕಲ್ಪನೆಯ ಚಿಂತನೆಯನ್ನು ಬಿತ್ತಿದವರು ಮಹಾತ್ಮಗಾಂಧಿ. ಅವರ ಬಗ್ಗೆ ಓದಿ, ಅವರನ್ನು ಅರ್ಥಮಾಡಿಕೊಳ್ಳಿ ಎಂದು ಕಾರ್ಯಕ್ರಮದಲ್ಲಿ ಆಶಯ ಭಾಷಣ ಮಾಡಿದ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ. ವೂಡೇ ಪಿ. ಕೃಷ್ಣ ಅವರು ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿದರು.
ಗಾಂಧಿ ಪ್ರಶ್ನಾತೀತರಲ್ಲ. ಆದರೆ ಅವರನ್ನು ಅರಿಯದೆ, ಓದದೆ ಟೀಕಿಸುವುದು ಸರಿಯಲ್ಲ. ಆದರೆ ಗಾಂಧಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಇಂದು ಅತ್ಯಂತ ಅವಹೇಳನಕಾರಿಯಾಗಿ ಚಿತ್ರಿಸುತ್ತಿರುವುದು ಕಂಡಾಗ ನೋವಾಗುತ್ತದೆ. ದೇಶಕ್ಕೆ ಸ್ವಾತಂತ್ರ ಒದಗಿಸುವಲ್ಲಿ ಪಾತ್ರ ವಹಿಸಿ, ಪ್ರಪಂಚವಿಂದು ಗೌರವಿಸುವ ಗಾಂಧಿಯನ್ನು ನಾವು ಅಧ್ಯಯನ ಮಾಡಬೇಕಾಗಿದೆ. ನಾವ್ಯಾರೂ ಗಾಂಧಿವಾದಿಗಳಾಗುವುದು ಬೇಡ. ಆದರೆ, ಗಾಂಧಿಯನ್ನು ಅನುಸರಿಸಿ ಗಾಂಧಿ ಮನಸ್ಕರಾದರೆ ಸಾಕು ಎಂದವರು ಹೇಳಿದರು.
ವೇದಿಕೆಯಲ್ಲಿ ಸಂಸತ್ತಿನ ಮಾಜಿ ಸದಸ್ಯ ಪಿ. ಕರುಣಾಕರನ್, ನಿವೃತ್ತ ಸೆಂಟ್ರಲ್ ಆಡಳಿತ ಟ್ರಿಬ್ಯೂನಲ್ ಸದಸ್ಯ ಸುಧೀರ್ ಕುಮಾರ್, ಉಪಸ್ಥಿತರಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ. ಜಯರಾಜ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ‘ಸಮಾನತೆಗಾಗಿ ಸಂಘರ್ಷ’ (ಹೋರಾಟದಲ್ಲೇ ಕೃಷ್ಣ ಶೆಟ್ಟಿ ಬದುಕು) ಕೃತಿಯನ್ನು ಲೈಲಾ ಕರುಣಾಕರನ್(ಸಂಸತ್ ಮಾಜಿ ಸದಸ್ಯ ಪಿ. ಕರುಣಾಕರನ್ ಅವರ ಪತ್ನಿ) ಹಾಗೂ ಕೆ. ಪ್ರಮೋದ್ ಕುಮಾರ್ ರೈ ಅವರ ಸರಕಾರಿ ಸೇವೆಯಿಂದ ಹೊಲದೆಡೆಗಿನ ನಡೆ ಎಂಬ ‘ಮಣ್ಣಿಗೆ ಮರಳುವ ಮುನ್ನ’ ಕೃತಿಯನ್ನು ನಿವೃತಚ್ತ ಅಪರ ಮುಖ್ಯ ಕಾರ್ಯದರ್ಶಿ ವಿ. ಬಾಲಸುಬ್ರಹ್ಮಣ್ಯನ್ ಅವರು ಬಿಡುಗಡೆಗೊಳಿಸಿದರು.
ಕುಂಬ್ರ ಜತ್ತಪ್ಪ ರೈ ಪ್ರತಿಷ್ಠಾನದ ಪ್ರಮುಖರಾದ ಪ್ರಮೋದ್ ರೈ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜತಿನ್ ಕೃಷ್ಣ ಹಾಗೂ ಕೋನಾರ್ಕ್ ರೈ ಅತಿಥಿಗಳನ್ನು ಗೌರವಿಸಿದರು. ಮಂಗಳೂರು ವಿವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಸೂಯ ರೈ ವಂದಿಸಿದರು. ಮಂಗಳೂರು ವಿವಿ ಕಾಲೇಜಿನ ಯುವ ರೆಡ್ಕ್ರಾಸ್ ಅಧಿಕಾರಿ ಡಾ. ಭಾರತಿ ಪಿಲಾರ್, ಮಂಗಳೂರು ವಿವಿಯ ರಾಷ್ಟ್ರೀಯ ಸೇವಾ ಯೋಜನಾ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ.ಎ. ಕಾರ್ಯಕ್ರಮ ನಿರೂಪಿಸಿದರು.