ವಕ್ಫ್ ತಿದ್ದುಪಡಿ ವಿರುದ್ಧ ಖಂಡನಾ ನಿರ್ಣಯ ಅಂಗೀಕರಿಸುವಂತೆ ಉಳ್ಳಾಲ ದರ್ಗಾ ಸಮಿತಿಯಿಂದ ಮುಖ್ಯಮಂತ್ರಿಗೆ ಮನವಿ
ಉಳ್ಳಾಲ: ಕೇಂದ್ರ ವಕ್ಫ್(ತಿದ್ದುಪಡಿ) ವಿಧೇಯಕದ ವಿರುದ್ಧ ತೆಲಂಗಾಣ ರಾಜ್ಯ ಸರಕಾರದ ಮಾದರಿಯಲ್ಲಿ ಕರ್ನಾಟಕ ಸರಕಾರವು ವಿಧಾನಮಂಡಲದ ಉಭಯ ಸದನಗಳಲ್ಲಿ ಖಂಡನಾ ನಿರ್ಣಯ ಮಂಡಿಸಿ ಅಂಗೀಕರಿಸುವಂತೆ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಜತೆ ಉಳ್ಳಾಲ ದರ್ಗಾ ಸಮಿತಿ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸಿತು.
ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ಹಾಗೂ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಝೀರ್ ಅಹ್ಮದ್ ಅವರೊಂದಿಗೆ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು, ಅವರ ಸರಕಾರಿ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿ ನಿಯೋಗವು ಮನವಿ ಸಲ್ಲಿಸಿತು.
ಯಾವುದೇ ಕಾರಣಕ್ಕೂ ವಿಧೇಯಕ ಅಂಗೀಕಾರವಾಗದಂತೆ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ವಿನಂತಿಸಿದರು.
ನಿಯೋಗದ ಮನವಿಯನ್ನು ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಕ್ಫ್(ತಿದ್ದುಪಡಿ) ವಿಧೇಯಕದ ವಿರುದ್ಧ ಜಂಟಿ ಸಂಸದೀಯ ಸಮಿತಿಗೆ ಪತ್ರ ಬರೆಯಲಾಗುವುದು. ಅಲ್ಲದೇ, ಮಸೂದೆ ಅಂಗೀಕಾರವಾಗದಂತೆ ಸರ್ಕಾರ ಎಲ್ಲಾ ಪ್ರಯತ್ನಗಳು ಮಾಡಲಿದೆ ಎಂದು ಭರವಸೆ ನೀಡಿದರು.
ನಿಯೋಗದಲ್ಲಿ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಮುಹಮ್ಮದ್ ಫಝ್ಲರ್ರಹೀಮ್ ಮುಜದ್ದಿದಿ, ಕೇಂದ್ರದ ಮಾಜಿ ಸಚಿವ ಡಾ.ಕೆ.ರಹ್ಮಾನ್ ಖಾನ್, ಉಳ್ಳಾಲ ದರ್ಗಾ ಅಧ್ಯಕ್ಷ ಬಿ.ಜಿ ಹನೀಫ್ ಹಾಜಿ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ, ಉಪಾಧ್ಯಕ್ಷರಾದ ಅಶ್ರಫ್ ಅಹ್ಮದ್ ರೈಟ್ವೇ, ಕೋಶಾಧಿಕಾರಿ ನಾಝಿಮ್ ರಹ್ಮಾನ್, ಮೌಲಾನಾ ಸೈಯದ್ ತನ್ವೀರ್ ಅಹ್ಮದ್ ಹಾಶ್ಮಿ, ಹಾಜಿ ಆಸಿಮ್ ಅಫ್ರೋಝ್ ಸೇಠ್, ಮೌಲಾನಾ ಸೈಯದ್ ಶಬ್ಬೀರ್ ಅಹ್ಮದ್ ನದ್ವಿ, ಮುಫ್ತಿ ಶಂಸುದ್ದೀನ್, ಬಜ್ಲಿ ಖಾಸ್ಮಿ, ಹಾಫಿಝ್ ಫಾರೂಕ್ ಅಹ್ಮದ್, ಹಾಫಿಝ್ ಸೈಯದ್ ಆಸಿಮ್ ಅಬ್ದುಲ್ಲಾ, ಡಾ.ಸಾದ್ ಬೆಳಗಾಮಿ, ಮೌಲಾನಾ ವಹೀದುದ್ದೀನ್ ಖಾನ್, ಮೌಲಾನಾ ಮಕ್ಸೂದ್ ಇಮ್ರಾನ್, ಮುಫ್ತಿ ಮುಹಮ್ಮದ್ ಅಸ್ಲಮ್ ರಶಾದಿ ಉಪಸ್ಥಿತರಿದ್ದರು.