ಇಂಗ್ಲೆಂಡ್ ನ ಹೌಸ್ ಆಫ್ ಲಾರ್ಡ್ಸ್ ನಿಂದ ಡಾ.ಪ್ರೀತಿ ಲೋಲಾಕ್ಷ ಸಹಿತ ಭಾರತೀಯರಿಬ್ಬರ ಲಿಖಿತ ಸಂಶೋಧನೆಗೆ ಮಾನ್ಯತೆ
ಮಂಗಳೂರು, ಅ.21: ಇಂಗ್ಲೆಂಡ್ ನ ಹೌಸ್ ಆಫ್ ಲಾರ್ಡ್ಸ್ ನ ಆಯ್ಕೆ ಸಮಿತಿಯು ಡಾ.ಪ್ರೀತಿ ಲೋಲಾಕ್ಷ ನಾಗವೇಣಿ ಮತ್ತು ಜಾರ್ಖಂಡ್ನ ರಾಂಚಿಯ ಡಾ.ಅಮಿತ್ ಆನಂದ್ ಎಂಬವರ ಲಿಖಿತ ದಾಖಲೆಗಳಿಗೆ ಮಾನ್ಯತೆ ನೀಡಿದೆ.ಅ.16ರಂದು ಪ್ರಕಟವಾದ ಸಮಿತಿಯ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಿದೆ.
ಭಾರತದ ಯುವ ಕಾನೂನು ವಿದ್ವಾಂಸರಿಬ್ಬರ ಶೈಕ್ಷಣಿಕ ಸಾಧನೆಗೆ ಜಾಗತಿಕವಾಗಿ ದೊರೆತ ಉತ್ಕೃಷ್ಟ ಮನ್ನಣೆ ಇದಾಗಿದೆ.
ಯುಕೆಯ ಹೌಸ್ ಆಫ್ ಲಾರ್ಡ್ಸ್ ನ ಆಯ್ಕೆ ಸಮಿತಿಯು 2015ರ ಆಧುನಿಕ ಗುಲಾಮಗಿರಿ ಕಾಯ್ದೆ (ಮಾಡರ್ನ್ ಸ್ಲೇವರಿ ಆ್ಯಕ್ಟ್)ಯ ಪ್ರಭಾವ ಮತ್ತು ಪರಿಣಾಮಗಳ ಕುರಿತಂತೆ ಲಿಖಿತ ದಾಖಲೆಗಳನ್ನು ಆಹ್ವಾನಿಸಿರುವ ಕ್ರಮವು ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಮತ್ತು ಅಂತಾರಾಷ್ಟ್ರೀಯ ಆತಂಕಗಳ ಫಲಿತಾಂಶಗಳ ಮೇಲೆ ಬೆಳಕು ಚೆಲ್ಲುವಲ್ಲಿ ಸ್ವಾಗತಾರ್ಹ ಹೆಜ್ಜೆಯಾಗಿದೆ.
ಬೆಂಗಳೂರಿನ ರೇವಾ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಲೀಗ್ ಸ್ಟಡೀಸ್ ನ ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಅಮಿತ್ ಆನಂದ್, 2022ರಲ್ಲಿ ಯುಕೆಯ ಲ್ಯಾಂಕಾಸ್ಟರ್ ವಿವಿಯಿಂದ ಪಿಎಚ್ಡಿ (ಕಾನೂನು) ಪೂರ್ಣಗೊಳಿಸಿದ್ದಾರೆ.
ಡಾ.ಪ್ರೀತಿ ಇತ್ತೀಚೆಗೆ ಲ್ಯಾಂಕಾಸ್ಟರ್ ಯುನಿವರ್ಸಿಟಿಯಿಂದ ಪಿಎಚ್ಡಿ ಪಡೆದಿದ್ದಾರೆ. ಯುಕೆ ಯುನಿವರ್ಸಿಟಿಯಲ್ಲಿ ಎಲ್ಎಲ್ ಎಂ ಪದವಿ ಶಿಕ್ಷಣ ಪೂರೈಸಿರುವ ಡಾ.ಪ್ರೀತಿ, ಬೆಂಗಳೂರಿನ ನ್ಯಾಶನಲ್ ಲಾ ಸ್ಕೂಲ್ ಆಫ್ ಇಂಡಿಯಾದಲ್ಲಿ ಚಿನ್ನದ ಪದಕದೊಂದಿಗೆ ಬಿಎಎಲ್ಎಲ್ ಬಿ (ಹಾನರ್ಸ್) ಪದವಿ ಶಿಕ್ಷಣ ಪೂರೈಸಿದ್ದಾರೆ.