ದ.ಕ. ಜಿಲ್ಲೆಯಲ್ಲಿ ಮರಳು ಅಭಾವವಿಲ್ಲ: ಗಣಿ ಇಲಾಖೆ ಸ್ಪಷ್ಟನೆ
ಫೈಲ್ ಫೋಟೊ
ಮಂಗಳೂರು: ದ.ಕ.ಜಿಲ್ಲೆಯ ನಾನ್ ಸಿಆರ್ಝಡ್ ಪ್ರದೇಶದ ನದಿ ಪಾತ್ರಗಳಲ್ಲಿ 25 ಮರಳು ಗಣಿ ಗುತ್ತಿಗೆಗಳನ್ನು ಮಂಜೂರು ಮಾಡಲಾಗಿದ್ದು, ಆ ಪೈಕಿ 24 ಮರಳು ಗಣಿ ಗುತ್ತಿಗೆಗಳು ಚಾಲ್ತಿಯಲ್ಲಿವೆ. ಅಲ್ಲದೆ ದ.ಕ.ಜಿಲ್ಲೆಯಲ್ಲಿ ಮರಳಿನ ಅಭಾವವಿಲ್ಲ ಎಂದು ಗಣಿ ಇಲಾಖೆ ಸ್ಪಷ್ಟನೆ ನೀಡಿದೆ.
ಮುಂಗಾರಿನ ಹಿನ್ನಲೆಯಲ್ಲಿ ನಿರ್ದಿಷ್ಟ ಷರತ್ತುಗಳಡಿ ಜೂನ್ನಿಂದ ಅಕ್ಟೋಬರ್ 15ರವರೆಗೆ ಮರಳು ತೆಗೆಯಲು ನಿರ್ಬಂಧವಿರುತ್ತದೆ. ಆದರೆ ಮಾನ್ಸೂನ್ ಅವಧಿಯಲ್ಲಿ ಈ ಮರಳು ಬ್ಲಾಕ್ ಗುತ್ತಿಗೆ ಪ್ರದೇಶಗಳ ಸ್ಟಾಕ್ ಯಾರ್ಡ್ಗಳಲ್ಲಿ 1,02,467 ಮೆಟ್ರಿಕ್ ಟನ್ ಮರಳು ದಾಸ್ತಾನು ಲಭ್ಯವಿತ್ತು. ಈ ಪೈಕಿ ಈವರೆಗೆ 27,023 ಮೆಟ್ರಿಕ್ ಟನ್ ಪ್ರಮಾಣದ ಮರಳು ಜಿಲ್ಲೆಯ ವಿವಿಧ ನಿರ್ಮಾಣ ಕಾಮಗಾರಿಗಳಿಗೆ ಪೂರೈಕೆಯಾಗಿದೆ. ಇನ್ನೂ 75,444 ಮೆಟ್ರಿಕ್ ಟನ್ ಪ್ರಮಾಣದ ಮರಳು ಸ್ಟಾಕ್ ಯಾರ್ಡ್ಗಳಲ್ಲಿ ಲಭ್ಯವಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಅಡಚಣೆ ಉಂಟಾಗಬಾರದೆಂಬ ಉದ್ದೇಶದಲ್ಲಿ ಮರಳು ಗುತ್ತಿಗೆದಾರರುಗಳಿಗೆ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳಂತೆ 30 ದಿನಗಳ ಕಾಲಾವಕಾಶ ನೀಡಲಾಗಿದೆ. ಜಿಲ್ಲೆಯಲ್ಲಿ 16 ಎಂ-ಸ್ಯಾಂಡ್ ಘಟಕಗಳು ಕಾರ್ಯನಿರ್ವಹಿಸುತ್ತಿದೆ. ಇದರಿಂದ ವಾರ್ಷಿಕವಾಗಿ 3,36,400 ಮೆ.ಟನ್ ಪ್ರಮಾಣದಷ್ಟು ಎಂ-ಸ್ಯಾಂಡ್ ಉತ್ಪಾದಿಸಬಹುದಾಗಿದೆ. 2023ರ ಎಪ್ರಿಲ್ನಿಂದ ಅಕ್ಟೋಬರ್ವರೆಗೆ 72,183 ಮೆ.ಟನ್ ಪ್ರಮಾಣದ ಎಂ-ಸ್ಯಾಂಡ್ ಜಿಲ್ಲೆಯ ವಿವಿಧ ಕಾಮಗಾರಿಗಳಿಗೆ ಪೂರೈಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.
ಕರಾವಳಿ ನಿಯಂತ್ರಣ ವಲಯದಲ್ಲಿ ಮರಳು ತೆಗೆಯುವ ಸಂಬಂಧ 2011ರ ಮಾರ್ಗಸೂಚಿಗಳನ್ನು ಪಾಲನೆ ಮಾಡದೆ ಮರಳು ತೆಗೆಯುವ ನೆಪದಲ್ಲಿ ವಾಣಿಜ್ಯ ಮರಳುಗಾರಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ರಾಷ್ಟ್ರೀಯ ಹಸಿರು ಪೀಠ ದಲ್ಲಿ ನಗರದ ಸುಲ್ತಾನ್ ಬತ್ತೇರಿಯ ನಿವಾಸಿ ಕಿರಣ್ ಕುಮಾರ್ ಹಾಗೂ ದ.ಕ. ನದಿ ಮೀನುಗಾರರ ಸಂದ ಮುಖಂಡರು ಮೀನುಗಾರರ ಸಮುದಾಯದ ಪರವಾಗಿ ಅರ್ಜಿ ಸಲ್ಲಿಸಿದ್ದಾರೆ. ಇದು ವಿಚಾರಣಾ ಹಂತದಲ್ಲಿದೆ. ರಾಷ್ಟ್ರೀಯ ಹಸಿರು ಪೀಠದ ದಕ್ಷಿಣ ವಲಯದ ಆದೇಶದಲ್ಲಿ ‘ಮರಳು ದಿಬ್ಬಗಳಲ್ಲಿ ತೆಗೆದ ಮರಳನ್ನು ನಿಯಮದಂತೆ ನದಿ ಪಾತ್ರದ ತಗ್ಗು ಪ್ರದೇಶಗಳಿಗೆ ಹಾಕಿ ಸಮತಟ್ಟು ಮಾಡುವಂತೆ ಮತ್ತು ಕಡಲ ತೀರ ಆರೈಕೆ ಹಾಗೂ ನದಿ ತೀರದ ಬಲರ್ವಧನೆಗೆ ಬಳಸುವಂತೆ’ ನಿರ್ದೇಶನ ನೀಡಿದೆ ಎಂದು ಗಣಿ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.
ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಅಧಿಸೂಚನೆಯಂತೆ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದಲ್ಲಿ ಹರಿ ಯುವ ನೇತ್ರಾವತಿ ಮತ್ತು ಫಲ್ಗುಣಿ ನದಿಗಳಲ್ಲಿ ಕ್ರಮವಾಗಿ 4 ಮತ್ತು 5 ಮರಳು ದಿಬ್ಬಗಳನ್ನು ಗುರುತಿಸಿದೆ. ಈ 9 ಮರಳು ದಿಬ್ಬಗಳಲ್ಲಿ 3,00,965 ಮೆ.ಟನ್ ಮರಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಕರಾವಳಿ ವಲಯ ನಿಯಂತ್ರಣ ಸಮಿತಿಯು ನಿರಾಕ್ಷೇಪಣಾ ಪತ್ರ ಪಡೆಯಲು ಕರಾವಳಿ ನಿಯಂತ್ರಣ ವಲಯ ನಿರ್ವಹಣಾ ಪ್ರಾಧಿಕಾರದ ಅನುಮೋದನೆ ಗಾಗಿ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ನಾನ್ ಸಿಆರ್ಝಡ್ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಮರಳು ಗುತ್ತಿಗೆದಾರರು ಸಲ್ಲಿಸಿರುವ ಮನವಿಯಲ್ಲಿ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಾವಳಿಗಳು 1994ರ ನಿಯಮ 31-ವೈರಂತೆ ವಾರ್ಷಿಕ ಉಪ ಖನಿಜದ ಉತ್ಪಾದನೆಯ ಶೇ.50ರಷ್ಟು ಖನಿಜ ಉತ್ಪಾದನೆ ಮಾಡಿ ಸಾಗಾಟ ಮಾಡುವಂತೆ ಕಡ್ಡಾಯವಿರುವ ನಿಯಮವನ್ನು ಸಡಿಲಗೊಳಿಸಬೇಕು ಮತ್ತು ಜಿಲ್ಲೆಯಲ್ಲಿ ಮರಳಿನ ಬೇಡಿಕೆ ಕಡಿಮೆಯಿರುವುದರಿಂದ ಅಂತರ್ ಜಿಲ್ಲಾ ಮರಳು ಸಾಗಾಟಕ್ಕೆ ಇರುವ ನಿರ್ಬಂಧವನ್ನು ತೆರವುಗೊಳಿಸಲು ಕೋರಿಕೊಂಡಿದ್ದಾರೆ. ಇದು ಜಿಲ್ಲೆಯಲ್ಲಿ ಸಾಕಷ್ಟು ಮರಳು ಲಭ್ಯವಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.