ಭ್ರೂಣ ಹತ್ಯೆ ತಡೆಗೆ ಕಠಿಣ ಕಾನೂನಿನ ಅಗತ್ಯತೆ ಬಗ್ಗೆ ಚಿಂತನೆ: ಸಚಿವ ದಿನೇಶ್ ಗುಂಡೂರಾವ್
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶನಿವಾರ ಮಂಗಳೂರಿನ ತಮ್ಮ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
ಮಂಗಳೂರು, ಡಿ.2: ಭ್ರೂಣ ಹತ್ಯೆ ತಡೆಗೆ ಕಠಿಣ ಕಾನೂನು ಅವಶ್ಯವಿದೆ. ಈ ಬಗ್ಗೆ ಕಾನೂನಿನಲ್ಲಿ ಬದಲಾವಣೆ ಅಗತ್ಯವಿದೆಯೇ ಎಂಬ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ದ.ಕ. ಜಿಲ್ಲಾಧಿಕಾರಿ ಕಚೇರಿ ಆವರಣದ ಉಸ್ತುವಾರಿ ಸಚಿವರ ಕಾರ್ಯಾಲಯದಲ್ಲಿ ಶನಿವಾರ ಬೆಳಗ್ಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಬಳಿಕ ಅವರು ಮಂಡ್ಯದಲ್ಲಿ ಬೆಳಕಿಗೆ ಬಂದಿರುವ ಭ್ರೂಣ ಹತ್ಯೆ ಪ್ರಕರಣದ ಬಗ್ಗೆ ಸುದ್ದಿಗಾರರ ಪ್ರಶ್ನಿಗೆ ಉತ್ತರಿಸುತ್ತಿದ್ದರು.
ಸ್ಕ್ಯಾನಿಂಗ್ ಸೆಂಟರ್ ಸೇರಿ ಹಲವು ಕಡೆ ಪರಿಶೀಲನೆ ಆಗಬೇಕಿದೆ. ಅದರ ಜೊತೆಗೆ ಕೆಲವು ಗುಪ್ತಚರ ಮಾಹಿತಿ ಕಲೆ ಹಾಕಬೇಕಿದೆ. ಭ್ರೂಣ ಹತ್ಯೆ ದಂಧೆಯಲ್ಲಿ ಯಾರಿದ್ದಾರೆ, ಯಾರು ಮಾಡ್ತಿದಾರೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಬೇಕಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಜೊತೆ ಆರೋಗ್ಯ ಇಲಾಖೆ ಕೂಡ ಭಾಗಿಯಾಗಬೇಕಿದೆ. ಅವರಿಗೆ ಸಹಕಾರ ಕೊಟ್ಟು ನಿಜಾಂಶ ತಿಳಿಯುವ ಕೆಲಸ ಆಗಬೇಕಿದೆ ಎಂದವರು ಹೇಳಿದರು.
ಭ್ರೂಣ ಹತ್ಯೆ ಕೇಸ್ ಆರೋಪವಿದ್ದ ವೈದ್ಯ ಸತೀಶ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಭ್ರೂಣ ಹತ್ಯೆ ಸಂಬಂಧ ನಾನು ಎಲ್ಲಾ ಕಡೆ ಭೇಟಿ ಕೊಟ್ಟು ಮಾಹಿತಿ ಕಲೆ ಹಾಕಿದ್ದೇನೆ. ಸಾರ್ವಜನಿಕರು ಸೇರಿ ಹಲವರಿಂದ ಮಾಹಿತಿ ಪಡೆಯಲಾಗಿದೆ. ಅದರಂತೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ಮುಖ್ಯಮಂತ್ರಿಗೆ ಮನವಿ ಮಾಡಿದೆ. ಆ ಬಳಿಕ ಸಿಐಡಿ ತನಿಖೆಗೆ ಸಿಎಂ ಆದೇಶ ಮಾಡಿದ್ದಾರೆ ಎಂದರು.
ಸತೀಶ್ ಆಯುಷ್ ಅಧಿಕಾರಿಯಾಗಿದ್ದು, ಅವರು ಯಾಕಾಗಿ ಆತ್ಮಹತ್ಯೆ ಮಾಡಿಕೊಂಡರು ಗೊತ್ತಿಲ್ಲ. ಭ್ರೂಣ ಹತ್ಯೆ ಪ್ರಕರಣಕ್ಕೂ ಅದಕ್ಕೂ ಸಂಬಂಧ ಇದ್ಯಾ ಗೊತ್ತಿಲ್ಲ. ಹೀಗಾಗಿ ನಾನು ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ.ಪೊಲೀಸ್ ಇಲಾಖೆ ಮತ್ತು ಸಿಐಡಿ ಈ ಬಗ್ಗೆ ಸಮಗ್ರ ತನಿಖೆ ನಡೆಸಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಡಯಾಲಿಸಿಸ್ ವ್ಯವಸ್ಥೆ ನಾನು ಆರೋಗ್ಯ ಸಚಿವ ಆಗುವುದಕ್ಕಿಂತ ಮೊದಲೇ ಗೊಂದಲದಲ್ಲಿದೆ. ಹಿಂದಿನ ಸರಕಾರ ಇದರ ನಿರ್ವಹಣೆಯನ್ನು ಎರಡು ಏಜೆನ್ಸಿಗೆ ವಹಿಸಿತ್ತು, ಅದರಲ್ಲಿ ಒಂದು ಏಜೆನ್ಸಿ ಅರ್ಧದಲ್ಲೇ ಬಿಟ್ಟಿತ್ತು. ಏಜೆನ್ಸಿಯ ನಿರ್ವಹಣೆ ಸಮರ್ಪಕವಾಗಿರಲಿಲ್ಲ. ಸಿಬ್ಬಂದಿಗೆ ಸಂಬಳ ಸರಿಯಾಗಿ ಪಾವತಿಸುತ್ತಿರಲಿಲ್ಲ, ಇಎಸ್ಸೈ, ಪಿಎಫ್ ಕಟ್ಟಿರಲಿಲ್ಲ. ಇದೀಗ ರಾಜ್ಯ ಸರಕಾರ ಇಎಸ್ಸೈ, ಪಿಎಫ್ ಕಟ್ಟಲು ವ್ಯವಸ್ಥೆ ಮಾಡುತ್ತಿದೆ. ಅದಕ್ಕೂ ಮೊದಲು ಆ ಏಜೆನ್ಸಿಯನ್ನು ಬ್ಲಾಕ್ ಲಿಸ್ಟ್ ಮಾಡುವ ಕೆಲಸ ಆಗುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ರಾಜ್ಯದಲ್ಲಿ ನಾಲ್ಕು ವಿಭಾಗದಲ್ಲಿ ಹೊಸ ಏಜೆನ್ಸಿಗಳಿಗೆ ಟೆಂಡರ್ ಪ್ರಕ್ರಿಯೆ ನಡೀತಾ ಇದೆ. ಡಯಾಲಿಸಿಸ್ ಮೆಷಿನ್ ಕೆಟ್ಟು ಹೋಗಿರುವ ಕಡೆಗಳಲ್ಲಿ ಅದನ್ನ ಬದಲಾಯಿಸುವ ಕಾರ್ಯವನ್ನು ಈಗಿರುವ ಏಜೆನ್ಸಿ ಮಾಡಬೇಕು, ಅಥವಾ ಹೊಸ ಏಜೆನ್ಸಿ ಬಂದ ಬಳಿಕ ಮಾಡಬೇಕಷ್ಟೇ. ಎಂದು ಸಚಿವರು ತಿಳಿಸಿದರು.
ಯಾವುದೂ ಆಗದೇ ಇದ್ದಲ್ಲಿ ಸರಕಾರವೇ ಡಯಾಲಿಸಿಸ್ ಯಂತ್ರಗಳ ನಿರ್ವಹಣೆ ಮಾಡುವ ಬಗ್ಗೆ ಚಿಂತನೆ ಇದೆ. ಸರ್ಕಾರವೇ ಮೆಷಿನ್ ಖರೀದಿಸಿ ನಿರ್ವಹಣೆ ಮಾಡಲು ಚಿಂತಿಸಿದೆ. ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಈ ಬಗ್ಗೆ ನಿರ್ಧರಿಸಲಾಗುವುದು. ಡಯಾಲಿಸಸ್ ಸಿಬ್ಬಂದಿಯ ಬಗ್ಗೆ ನಮಗೆ ಕಾಳಜಿ ಇದೆ.ಅವರಿಗೆ ಯಾವುದೇ ಸಮಸ್ಯೆ ಆಗದಂತೆ ನಾವು ನೋಡಿಕೊಳ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.