ತೊಕ್ಕೊಟ್ಟು: ಪೊಲೀಸರೊಂದಿಗೆ ಜಟಾಪಟಿಗೆ ಕಾರಣವಾದ ಬಿಜೆಪಿ ಪ್ರತಿಭಟನೆ
ಉಳ್ಳಾಲ, ಜೂ.20: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ತೊಕ್ಕೊಟ್ಟಿನಲ್ಲಿ ಗುರುವಾರ ಬಿಜೆಪಿ ನಡೆಸಿದ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಜಟಾಪಟಿ ನಡೆದಿದೆ.
ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಬಿಜೆಪಿ ಕರೆ ನೀಡಿದ್ದು, ಅದರಂತೆ ತೊಕ್ಕೊಟ್ಟಿನಲ್ಲಿ ರಸ್ತೆ ತಡೆದು ಪ್ರತಿಭಟಿಸಲು ಮುಂದಾದ ಬಿಜೆಪಿ ಮಂಗಳೂರು ಮಂಡಲದ ಯುವ ಮೋರ್ಚಾ ಅಧ್ಯಕ್ಷ ಮುರಳಿ ಕೊಣಾಜೆಯನ್ನು ರಸ್ತೆಯಿಂದ ಬದಿಗೆ ತೆರಳುವಂತೆ ಉಳ್ಳಾಲ ಠಾಣಾ ಇನ್ ಸ್ಪೆಕ್ಟರ್ ಎಚ್.ಎನ್.ಬಾಲಕೃಷ್ಣ ಸೂಚಿಸಿ ತರಾಟೆಗೈದರೆನ್ನಲಾಗಿದೆ. ಇದರಿಂದ ಆಕ್ರೋಶ ಗೊಂಡ ಬಿಜೆಪಿ ಕಾರ್ಯಕರ್ತರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ಕೆಲ ಕಾಲ ತೀವ್ರ ಮಾತಿನ ಚಕಮಕಿಯೂ ನಡೆಯಿತು.
ತೊಕ್ಕೊಟ್ಟು ಫ್ಲೈ ಓವರ್ ಕೆಳಗಡೆ ಬಿಜೆಪಿಯು ಪ್ರತಿಭಟನಾ ಸಭೆ ಹಮ್ಮಿಕೊಂಡಿತ್ತು. ಸಭೆಯಲ್ಲಿ ಬಿಜೆಪಿಯ ಜಿಲ್ಲಾ ನಾಯಕರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ದಿನೇಶ್ ಅಮ್ಟೂರು, ಮಹೇಶ್ ಜೋಗಿ ಸೇರಿದಂತೆ ಮಂಗಳೂರು ಮಂಡಲದ ಮುಖಂಡರು ಭಾಗವಹಿಸಿದ್ದರು. ಬಳಿಕ ಸೇರಿದ್ದ ಬಿಜೆಪಿ ಕಾರ್ಯಕರ್ತರು ಸಾಂಕೇತಿಕವಾಗಿ ಹೆದ್ದಾರಿ ತಡೆಯಲು ಮುಂದಾದಾಗ ಸ್ಥಳದಲ್ಲಿ ಬಂದೋಬಸ್ತ್ ನಲ್ಲಿದ್ದ ಇನ್ ಸ್ಪೆಕ್ಟರ್ ಬಾಲಕೃಷ್ಣ ಅವರು ಯುವ ಮೋರ್ಚದ ಅಧ್ಯಕ್ಷ ಮುರಳಿ ಕೊಣಾಜೆಯನ್ನು ಶರ್ಟ್ ಕಾಲರ್ ಹಿಡಿದು ಎಳೆದಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಘಟನೆಯಿಂದ ಆಕ್ರೋಶಗೊಂಡ ಮುರಳಿ, ನನ್ನನ್ನು ತಳ್ಳಿದ್ದು ಯಾಕೆಂದು ಇನ್ ಸ್ಪೆಕ್ಟರ್ ಅವರನ್ನು ಪ್ರಶ್ನಿಸಿ ವಾಗ್ವಾದಕ್ಕಿಳಿದರು. ಇದರಿಂದ ಕೆಲ ಕಾಲ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.
ಬಳಿಕ ಮಧ್ಯ ಪ್ರವೇಶಿಸಿದ ಮಂಗಳೂರು ದಕ್ಷಿಣ ಉಪವಿಭಾಗದ ಪ್ರಭಾರ ಎಸಿಪಿ ರವೀಶ್ ನಾಯ್ಕ್ ಅವರು ಬಿಜೆಪಿ ಪ್ರಮುಖರಲ್ಲಿ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರು.