ತೊಕ್ಕೊಟ್ಟು: ವಿವಿಧ ಸಂಘಟನೆಗಳ ವತಿಯಿಂದ ಸೌಹಾರ್ದ ಇಫ್ತಾರ್ ಕೂಟ
ಉಳ್ಳಾಲ: ದೇಶದಲ್ಲಿ ವಿವಿಧ ಜಾತಿ ಧರ್ಮ ಪಂಗಡ ಹೊಂದಿ ಸೌಹಾರ್ದತೆ ಯಿಂದ ಬಾಳಿ ಬಂದಿದೆ. ಪ್ರಸಕ್ತ ಕಾಲಘಟ್ಟದಲ್ಲಿ ಜಾತಿ ಧರ್ಮದ ಪ್ರಶ್ನೆ ಜಾಸ್ತಿ ಆಗುತ್ತಿರುವುದರಿಂದ ಇಂತಹ ಸೌಹಾರ್ದ ಇಫ್ತಾರ್ ನಂತಹ ಕಾರ್ಯಕ್ರಮ ಅಗತ್ಯ ಎಂದು ಮಂಗಳೂರು ವಿವಿ ಸೋಶಿಯಲ್ ವರ್ಕ್ ಸ್ಟಡೀಸ್ ನ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಮೋಹನ್. ಎಸ್ ಸಿಂಘೆ ಹೇಳಿದರು.
ಸದ್ಭಾವನಾ ವೇದಿಕೆ ಉಳ್ಳಾಲ, ಹ್ಯುಮಾನಿಟಿ ಫೌಂಡೇಶನ್ ಮಂಗಳೂರು, ಪೊಸಕುರಲ್ ತೊಕ್ಕೊಟ್ಟು, ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಉಳ್ಳಾಲ ಹಾಗೂ ಜಮಾತೆ ಇಸ್ಲಾಮೀ ಹಿಂದ್ ಉಳ್ಳಾಲ ಇವುಗಳ ಜಂಟಿ ಆಶ್ರಯದಲ್ಲಿ ತೊಕ್ಕೊಟ್ಟು ಸ್ಮಾಶ್ ಬ್ಯಾಡ್ಮಿಂಟನ್ ನಲ್ಲಿ ನಡೆದ ಸೌಹಾರ್ದ ಇಫ್ತಾರ್ ಕೂಟದಲ್ಲಿ ಅವರು ಮಾತನಾಡುತ್ತಿದ್ದರು.
ಎಲ್ಲ ಧರ್ಮದವರಿಗೆ ರಕ್ಷಣೆ ನೀಡುವ ಒಂದು ಗ್ರಂಥವಾದ ಸಂವಿಧಾನ ಅಪಾಯದಲ್ಲಿದೆ. ಸಂಸ್ಕೃತಿ ಶ್ರೀಮಂತಿಕೆ ಹೊಂದಿದೆ. ಆದರೆ ಅದೇ ರೀತಿ ಕೋಮು ಬಣ್ಣ ಕೂಡಾ ಬೆಳೆಯುತ್ತಿರುವುದು ಖೇದಕರ ಎಂದು ಹೇಳಿದರು.
ಸದ್ಭಾವನಾ ವೇದಿಕೆ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪೊಸಕುರಲ್ ತೊಕ್ಕೊಟ್ಟು ಇದರ ನಿರ್ದೇಶಕ ವಿದ್ಯಾಧರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ, ಸಂತ ಅಲೋಶಿಯಸ್ ಕೈಗಾರಿಕಾ ತರಬೇತಿ ಕೇಂದ್ರ ದ ಆಫೀಸರ್ ವಿಲ್ಸನ್ ಎನ್. ಹೈದರ್ ಪರ್ತಿಪ್ಪಾಡಿ, ಕೃಷ್ಣಪ್ಪ ಸಾಲಿಯಾನ್, ಕೃಷ್ಣ ಗಟ್ಟಿ , ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಅಧ್ಯಕ್ಷ ಡಿ.ಝೈನುದ್ದೀನ್, ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಸ್ಥಾನೀಯ ಅಧ್ಯಕ್ಷ ಅಬ್ದುಲ್ ಕರೀಂ ಸ್ಮಾಶ್ ಬ್ಯಾಡ್ಮಿಂಟನ್ ನ ಅಧ್ಯಕ್ಷ ರಫೀಕ್ ಉಪಸ್ಥಿತರಿದ್ದರು.
ಹ್ಯುಮಾನಿಟಿ ಫೌಂಡೇಶನ್ ಮಂಗಳೂರು ಇದರ ಅಧ್ಯಕ್ಷ ನಾಸೀರ್ ಅಹ್ಮದ್ ಸಾಮಣಿಗೆ ಸ್ವಾಗತಿಸಿದರು. ಮುಝಮ್ಮಿಲ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು.