ಮಂಗಳೂರು: ಗಾಂಜಾ ದಾಸ್ತಾನು ಪ್ರಕರಣದ ಆರೋಪಿಗಳ ಖುಲಾಸೆ
ಸಾಂದರ್ಭಿಕ ಚಿತ್ರ
ಮಂಗಳೂರು: ಗಾಂಜಾ ದಾಸ್ತಾನು ಹೊಂದಿದ ಪ್ರಕರಣದ ಮೂವರು ಆರೋಪಿಗಳನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಖುಲಾಸೆಗೊಳಿಸಿದೆ.
ಅಹ್ಮದ್ ಸಾಬಿತ್, ಅಬ್ದುಲ್ ಖಾದರ್, ಮುಹಮ್ಮದ್ ಅನ್ಸಾರ್ ಖುಲಾಸೆಗೊಂಡ ಆರೋಪಿಗಳಾಗಿದ್ದಾರೆ.
2020ರ ಅ.8ರಂದು ಬಂಟ್ವಾಳ ತಾಲೂಕು ಬಿ.ಮೂಡ ಗ್ರಾಮದ ಮದ್ದ ಎಂಬಲ್ಲಿರುವ ಬಾಡಿಗೆ ಮನೆಯಲ್ಲಿ ಈ ಮೂವರು ಕಾಂತಡ್ಕ ನಿವಾಸಿ ಮುಹಮ್ಮದ್ ಇರ್ಷಾದ್ನ ಹಣಕಾಸಿನ ನೆರವಿನಿಂದ ಅಕ್ರಮವಾಗಿ ಗಾಂಜಾವನ್ನು ವಿಶಾಖಪಟ್ಟಣದಿಂದ ಖರೀದಿಸಿ ದಾಸ್ತಾನಿರಿಸಿದ್ದರು ಎಂದು ಆರೋಪಿಸಲಾಗಿತ್ತು.
ಬಂಟ್ವಾಳ ನಗರ ಪೊಲೀಸ್ ಠಾಣೆಯ ಎಸ್ಸೈ ಅವಿನಾಶ್ ಹೆಚ್. ಗೌಡ ಅವರು ಎಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯದಿಂದ ಸರ್ಚ್ವಾರಂಟ್ ಪಡೆದು ದಾಳಿ ನಡೆಸಿದಾಗ ಮುಹಮ್ಮದ್ ಅನ್ಸಾರ್ ತಪ್ಪಿಸಿಕೊಂಡ. ಪ್ರಮುಖ ಆರೋಪಿ ಅಹ್ಮದ್ ಸಾಬಿತ್ನನ್ನು ವಶಕ್ಕೆ ಪಡೆದ ಪೊಲೀಸರು ಮನೆಯನ್ನು ಪರಿಶೀಲಿಸಿ 39.948 ಕೆ.ಜಿ. ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದರು. ನಂತರ ಅಬ್ದುಲ್ ಖಾದರ್ನ್ನು ವಶಕ್ಕೆ ಪಡೆದು ಆತನಿಂದ 38 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಈ ಬಗ್ಗೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯ 27 ಮಂದಿ ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಿದೆ. ವಶಪಡಿಸಿಕೊಂಡ ವಸ್ತು ರಾಸಾಯನಿಕ ವಿಧಿ ವಿಜ್ಞಾನ ಪರೀಕ್ಷೆಯಲ್ಲಿ ಗಾಂಜಾ ಎಂದು ದೃಢಪಟ್ಟಿತ್ತು. ಆದರೆ ಈ ಪ್ರಕರಣದಲ್ಲಿ ಎನ್ಡಿಪಿಎಲ್ ಕಾಯ್ದೆ ಪ್ರಕಾರ ಸರಿಯಾಗಿ ಕ್ರಮಗಳನ್ನು ಅನುಸರಿಸಿಲ್ಲ ಹಾಗೂ ಆರೋಪಿಗಳ ಮೇಲಿನ ಆರೋಪವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಮನಗಂಡು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರವೀಂದ್ರ ಎಂ. ಜೋಷಿ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ.
ಈ ಪ್ರಕರಣದಲ್ಲಿ ವಕೀಲರಾದ ವೇಣುಕುಮಾರ್, ಯುವರಾಜ್ ಕೆ. ಅಮೀನ್, ಓಮರ್ ಫಾರೂಕ್, ಕಾರ್ತಿಕ ಉಡುಪ ವಾದಿಸಿದ್ದರು.