2 ಸಾವಿರಕ್ಕೆ ಲೋಡ್ ಮರಳು ಯಾರಿಗೆ ಕೊಟ್ಟಿದ್ದೀರಿ ?: ಬಿಜೆಪಿಗೆ ಕಾಂಗ್ರೆಸ್ ದ.ಕ. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಪ್ರಶ್ನೆ
ಮಂಗಳೂರು, ನ. 8: ದ.ಕ. ಜಿಲ್ಲೆಯಲ್ಲಿ ಮರಳಿನ ಸಮಸ್ಯೆಗೆ ನಾಲ್ಕು ವರ್ಷ ಆಡಳಿತ ನಡೆಸಿದ ಬಿಜೆಪಿಯ ಮರಳು ನೀತಿಯೇ ಕಾರಣ ಹೊರತು ಕಾಂಗ್ರೆಸ್ ಸರಕಾರವಲ್ಲ. ಫೋನ್ ಮಾಡಿದರೆ ಸಾಕು, 2 ಸಾವಿರಕ್ಕೆ ಒಂದು ಲೋಡ್ ಮರಳು ಮನೆ ಬಾಗಿಲಿಗೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮಾಡಿದ್ದ ಘೋಷಣೆ ಅನುಷ್ಠಾನ ಆಗಿದೆಯೇ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಪ್ರಶ್ನಿಸಿದ್ದಾರೆ.
ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಅವರು ಕಾಂಗ್ರೆಸ್ ಸರಕಾರದ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಅವರು ಪ್ರತಿಕ್ರಿಯಿಸಿದರು.
ಯು.ಟಿ. ಖಾದರ್ ಸಚಿವರಾಗಿದ್ದಾಗ ಸ್ಯಾಂಡ್ ಬಜಾರ್ ಆಪ್ ಮಾಡಿ ಕಡಿಮೆ ಬೆಲೆಗೆ ಕ್ಲಪ್ತ ಸಮಯದಲ್ಲಿ ಮರಳು ಸಿಗು ವಂತೆ ಮಾಡಿದ್ದರು. ಅದನ್ನು ನಿಲ್ಲಿಸಿದವರು ಯಾರು? ಡ್ರೆಜ್ಜಿಂಗ್ ಮೂಲಕ ಸೇತುವೆ ಅಡಿ ನಿರ್ಬಂಧಿತ ಪ್ರದೇಶದಲ್ಲಿ ಮರಳುಗಾರಿಕೆ ನಡೆದಿದ್ದು ತಮ್ಮ ನಾಲ್ಕು ವರ್ಷಗಳ ಆಡಳಿತ ಅವಧಿಯಲ್ಲೇ ಎಂಬುದನ್ನು ಶಾಸಕ ವೇದವ್ಯಾಸ ಕಾಮತ್ ನೆನಪಿಸಿಕೊಳ್ಳಬೇಕು ಎಂದವರು ಹೇಳಿದರು.
ನಮ್ಮ ಸರಕಾರ ಆಡಳಿತಕ್ಕೆ ಬಂದು ಆಗಿರುವುದು ನಾಲ್ಕು ತಿಂಗಳು. ಆಸ್ಕರ್ ಫೆರ್ನಾಂಡಿಸ್ ಅವರು ಕೇಂದ್ರ ಸಚಿವರಾಗಿ ದ್ದಾಗ ಸಿಆರ್‌ಝೆಡ್‌ನಡಿ ಕೆಲವು ಮಾರ್ಪಾಡು ಮಾಡಿ ತಕ್ಕ ಮಟ್ಟಿಗೆ ವ್ಯವಸ್ಥೆ ಮಾಡಿದ್ದರು. ಡಬಲ್ ಇಂಜಿನ್ ಸರಕಾರದಲ್ಲಿ ಈ ಕುರಿತು ಸರಿಪಡಿಸುವ ಅವಕಾಶವಿದ್ದರೂ ಪ್ರಯತ್ನ ಮಾಡಿಲ್ಲ. ಕನಿಷ್ಟ ಈ ಬಗ್ಗೆ ಒಂದು ಸಲವಾದರೂ ನಿಯೋಗ ಕೇಂದ್ರಕ್ಕೆ ಹೋಗಿ ಪ್ರಯತ್ನಿಸಿದೆಯೇ ಎಂದು ಹರೀಶ್ ಕುಮಾರ್ ಪ್ರಶ್ನಿಸಿದರು.
ಬಿಜೆಪಿ ಆಡಳಿತದಲ್ಲಿ ಸ್ಮಾರ್ಟ್ ಸಿಟಿ ಅನುದಾನ ಬೇಕಾಬಿಟ್ಟಿ ಕಾಮಗಾರಿಗಳಿಗೆ ಬಳಕೆ ಮಾಡಲಾಗಿದೆ ಎಂದು ದೂರಿದ ಹರೀಶ್ ಕುಮಾರ್, ಆಸ್ಕರ್ ಸಚಿವರಾಗಿದ್ದಾಗ ಶಿರಾಡಿ ಘಾಟ್ ಸುರಂಗಕ್ಕೆ ಡಿಪಿಆರ್ ಹಂತಕ್ಕೆ ಬಂದಿತ್ತು. ಬಿಜೆಪಿ ಬಂದು 10 ವರ್ಷ ದಲ್ಲಿ ಆ ಯೋಜನೆ ಏನಾಯಿತು ಎಂದು ಪ್ರಶ್ನಿಸಿದರು.
ನಿಮ್ಮ ಜವಾಬ್ದಾರಿ ನಿಭಾಯಿಸಿದೆ ಕಾಂಗ್ರೆಸ್ ಮೇಲೆ ಗೂಬೆ ಕೂರಿಸಬೇಡಿ. ನಂತೂರು ಫ್ಲೈ ಓವರ್ ಯಾಕೆ ಇನ್ನೂ ಮಾಡ್ತಿಲ್ಲ, 10 ವರ್ಷಗಳ ಅವಧಿಯಲ್ಲಿ ಆದ ಪಂಪ್ ವೆಲ್ ಒಂದು ಮಳೆಗೆ ಸ್ವಿಮ್ಮಿಂಗ್ ಪೂಲ್ ಆಗ್ತಿದೆ. ಅದರ ಬಗ್ಗೆ ಯಾಕೆ ಮಾತಾಡ್ತಿಲ್ಲ ನೀವು? ಎಂದು ಅವರು ಪ್ರಶ್ನಿಸಿದರು.
ಸುರತ್ಕಲ್ ಟೋಲ್ ಆರಂಭ ಆಗುವ ಸುದ್ದಿ ಇದೆ. ಅದು ಆರಂಭ ಆಗ್ತದಾ ಇಲ್ಲವಾ ಮೊದಲು ಸ್ಪಷ್ಟಪಡಿಸಿ, ಎಲ್ಲ ಹೋರಾಟದ ಮೂಲಕ ಬಂದ್ ಆಗಿದ್ದು, ಈಗ ನಿಜ ವಿಷಯ ಹೇಳಿ ಎಂದು ಹರೀಶ್ ಕುಮಾರ್ ಸವಾಲೆಸೆದರು.
ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡುತ್ತಿಲ್ಲ ಎಂದು ಬಿಜೆಪಿ ಶಾಸಕರು ದೂರಿದ್ದಾರೆ. ಆದರೆ ಚುನಾವಣೆಗೆ ಪೂರ್ವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರೇ ರಸ್ತೆ, ಚರಂಡಿ ಅಭಿವೃದ್ಧಿ ಬಗ್ಗೆ ಮಾತನಾಡಬೇಡಿ. ಹಿಂದುತ್ವ, ಲವ್‌ಜಿಹಾದ್ ಬಗ್ಗೆ ಮಾತನಾಡಿ ಎಂದು ಹೇಳಿದ್ದರು. ಈಗ ಯಾಕೆ ಅಭಿವೃದ್ಧಿ ಬಿಜೆಪಿಗೆ ಎಂದು ಮಾತಿನ ಮೂಲಕ ಕುಟುಕಿದ ಹರೀಶ್ ಕುಮಾರ್, ಮಂಜೂ ರಾತಿ ಇಲ್ಲದೆ ಕಾಮಗಾರಿ ಮಾಡಿಸಿ ಈಗ ಅನುದಾನ ಇಲ್ಲ ಅಂತಾರೆ. ಕಾಂಗ್ರೆಸ್ ಸರಕಾರ ಅನುದಾನ ತಾರತಮ್ಯ ಮಾಡಿಲ್ಲ, ತಾರತಮ್ಯ ಆರಂಭಿಸಿದ್ದೇ ಬಿಜೆಪಿ ಸರಕಾರ. ಬಿಜೆಪಿ ಅವಧಿಯಲ್ಲಿ ಆಡಳಿತಾತ್ಮಕ ಅನುಮತಿ ಇಲ್ಲದೆ ನಡೆಸಲಾದ ಕಾಮಗಾರಿಗಳಿಗೆ ಅನುದಾನ ನೀಡಲು ಆಗದು ಎಂದು ಹೇಳಿದರು.
ಬಿಜೆಪಿ ಆಡಳಿತ ಕೊನೆ ಅವಧಿಯಲ್ಲಿ ಗುತ್ತಿಗೆದಾರರಿಗೆ 30000 ಕೋಟಿ ರೂ. ಕಾಮಗಾರಿ ಬಿಲ್ ಬಾಕಿ ಇಟ್ಟಿದಾದರೆ. ಅದಕ್ಕೆ ಹಣ ಕೊಬೇಕು. ಅದರ ಮೇಲೆ ಅನಧಿಕೃತ ಕೆಲಸಗಳಿಗೆ ಬಿಲ್ ಕೊಡಬೇಕು ಎಂದು ಕೇಳುವುದೆಂದರೆ ಏನರ್ಥ ಎಂದು ಹರೀಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ವೇದವ್ಯಾಸ ಕಾಮತ್ ಅವರಿಗೆ ಅನುಭವ ಕೊರತೆ ಇದೆ, ನಿಮ್ಮ ಎಂಜಿನ್ ನಿಂದ ಹೊಗೆ ಮಾತ್ರ, ಅದು ಓಡಲ್ಲ. ವಿರೋಧ ಪಕ್ಷವೆ ನಿಮಗೆ ಫಿಟ್, ಅದನ್ನೇ ಕಾಯಂ ಮಾಡಿಕೊಳ್ಳಿ ಎಂದು ಹೇಳಿದರು.
ಗ್ಯಾರಂಟಿಗಳಿಂದ ಸರಕಾರ ದಿವಾಳಿ ಎಂದವರು ಈಗ ಛತ್ತೀಸ್ ಗಡದಲ್ಲಿ ಮೋದಿ ಗ್ಯಾರಂಟಿ ನೀಡಿದಾರೆ, ಅದರಿಂದ ಸರಕಾರ ದಿವಾಳಿ ಆಗುವುದಿಲ್ಲವೇ? ರಾಜ್ಯದಲ್ಲಿನ ಬರ ಸಮೀಕ್ಷೆ ನಡೆಸಿ ಪರಿಹಾರ ನೀಡುವ ಬಗ್ಗೆ ಮೌನವಾಗಿರುವ ಕೇಂದ್ರ ಸರಕಾರ ಗ್ಯಾರಂಟಿಗಳ ವಿಷಯದಲ್ಲಿ ಕಾಂಗ್ರೆಸ್ ಹಾದಿ ತುಳಿಯುತ್ತಿರುವುದು ಒಳ್ಳೆಯ ವಿಚಾರವೇ? ಬಿಜೆಪಿ ತಮ್ಮ ಆಡಳಿತ ದಲ್ಲಿ ಕಾಂಗ್ರೆಸ್ ಮಾಡಿದ ಯೋಜನೆಗಳಿಗೆ ಹೆಸರು ಬದಲಾಯಿಸಿರುವುದೇ ಮಾಡಿರುವ ಸಾಧನೆ ಎಂದು ಅವರು ಹೇಳಿದರು.
ಗೋಷ್ಟಿಯಲ್ಲಿ ಪದ್ಮನಾಭ ನರಿಂಗಾನ, ಟಿ.ಕೆ. ಸುಧೀರ್, ಗಣೇಶ್ ಪಜಾರಿ, ಅಬ್ದುಲ್ ಸಲೀಂ, ಶುಭೋದಯ ಆಳ್ವ, ಪ್ರಕಾಶ್ ಸಾಲ್ಯಾನ್, ಲಾರೆನ್ಸ್ ಡಿಸೋಜಾ, ಸುಭಾಶ್ ಶೆಟ್ಟಿ, ನೀರಜ್ ಪಾಲ್, ಯೋಗೇಶ್ ಕುಮಾರ್ ಮೊದಲಾವದರು ಉಪಸ್ಥಿತರಿದ್ದರು.