ಇಂದಿನ ಸೋಲು ಮುಂದಿನ ಗೆಲುವಿಗೆ ಹಾದಿ: ಯು.ಟಿ.ಖಾದರ್
‘ಹೊಂಬೆಳಕು-2024’ ಸ್ಥಳೀಯಾಡಳಿತ ಸಂಭ್ರಮ ಉದ್ಘಾಟನೆ
ಮಂಗಳೂರು, ಮಾ.2: ಜೀವನದಲ್ಲಿ ಸೋಲು ಗೆಲುವು ಸಹಜ. ಗೆದ್ದಾಗ ಸಂಭ್ರಮಿಸುವ ಜತೆಗೆ ಸೋತಾಗ ಕುಗ್ಗದೆ ಮುಂದಿನ ಗೆಲುವಿನ ದಾರಿಯಾಗಿ ಸ್ವೀಕರಿಸಿದರೆ ಜೀವನದ ಹಾದಿ ಸುಗಮವಾಗಿರುತ್ತದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅಡ್ಯಾರ್‌ನ ಸಹ್ಯಾದ್ರಿ ಕಾಲೇಜಿನ ಕ್ರೀಡಾಂಗಣದಲ್ಲಿ ಗ್ರಾಮ ಸ್ವರಾಜ್ ಪ್ರತಿಷ್ಟಾನ ಹಾಗೂ ಸ್ಥಳೀಯ ಸಂಸ್ಥೆಗಳ ಆಶ್ರಯದಲ್ಲಿ ಕ್ರೀಡೋತ್ಸವ- ಸಾಂಸ್ಕೃತಿಕ ಸ್ಪರ್ಧೆಗಳ ‘ಹೊಂಬೆಳಕು -2024’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳ ಯೋಜನೆಗಳನ್ನು ತಳಸ್ತರದಲ್ಲಿ ಸಾಮಾನ್ಯ ಜನರಿಗೆ ತಲುಪಿಸುವಲ್ಲಿ ಗ್ರಾಮ ಪಂಚಾಯತ್‌ಗಳ ಸದಸ್ಯರು ಹಾಗೂ ಪ್ರತಿನಿಧಿಗಳ ಪಾತ್ರ ಮಹತ್ತರವಾಗಿದ್ದು, ಅವರಿಗಾಗಿ ಈ ಕಾರ್ಯಕ್ರಮ ಯೋಜನೆ ಉತ್ತಮ ಚಿಂತನೆ ಎಂದರು.
ಕ್ರೀಡಾಜ್ಯೋತಿಯ ಮೂಲಕ ಕ್ರೀಡಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ರಾಜಕೀಯ ಏನೇ ಇದ್ದರೂ ಜನ ಸೇವೆ, ಅಭಿವೃದ್ಧಿ ಕಾರ್ಯಗಳು ಜನಪ್ರತಿ ನಿಧಿ ಗಳಿಗೆ ಬಹು ಮುಖ್ಯ ಆಗಿರಬೇಕು ಎಂದರು.
ಪಕ್ಷಾತೀತವಾಗಿ ಜನಪ್ರತಿನಿಧಿಗಳನ್ನು ಒಟ್ಟು ಸೇರಿಕೊಂಡು ಮಾಡುವತಂಹ ಈ ಕಾರ್ಯಕ್ರಮ ನಿರಂತರವಾಗಿ ಮುಂದುವರಿಸುವಂತೆ ಕಾರ್ಯಕ್ರಮ ಆಯೋಜಕರಾದ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರಿಗೆ ಸಚಿವರು ಸಲಹೆ ನೀಡಿದರು.
ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಪ್ರತಿ ಕ್ಷೇತ್ರದಲ್ಲಿ ಪಾರಂಪರಿಕ ಹಾಗೂ ಇತಿಹಾಸ ಹಿನ್ನೆಲೆಯೊಂದಿಗೆ ಸಂಸ್ಕೃತಿಯೂ ಬೆಸೆದುಕೊಂಡಿದೆ. ಅದು ನಮ್ಮ ದೇಶದ ವೈಶಿಷ್ಟ್ಯವಾಗಿದ್ದು, ಹೊಸತನವನ್ನು ಸ್ವೀಕರಿಸುವ ಜತೆಗೆ ಹಳೆಯದನ್ನು ಮರೆಯದೆ ಒಟ್ಟಾಗಿ ಸ್ವೀಕರಿಸಿಕೊಂಡು ನಾವು ಮುಂದೆ ಸಾಗಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮ ಸ್ವರಾಜ್ ಪ್ರತಿಷ್ಟಾನದ ಉದ್ಘಾಟನೆ ನೆರವೇರಿಸಲಾಯಿತು. ಮೂರಕ್ಕಿಂತ ಅಧಿಕ ಬಾರಿ ಜಿ.ಪಂ. ಹಾಗೂ ತಾಲೂಕು ಪಂಚಾಯತ್ ಸದಸ್ಯರಾಗಿ ಆಯ್ಕೆಯಾದವರು, ಆರು ಹಾಗೂ ಅದಕ್ಕಿಂತ ಹೆಚ್ಚು ಬಾರಿ ಚುನಾಯಿತರಾದ ಗ್ರಾ.ಪಂ. ಸದಸ್ಯರಿಗೆ ಗೌರವಾಭಿನಂದನೆ ಸಲ್ಲಿಸಲಾಯಿತು.
ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಅಶೋಕ್ ರೈ,
ಶಾಸಕ ನರೇಂದ್ರ ಸ್ವಾಮಿ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಕಾರ್ಯಕ್ರಮ ಸಂಘಟಕ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ, ಮಾಜಿ ಸಚಿವ ಅಭಯಚಂದ್ರ ಜೈನ್, ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ದೇವಿ ಪ್ರಸಾದ್ ಶೆಟ್ಟಿ, ದಕ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ಗೋಕರ್ಣ ಕ್ಷೇತ್ರದ ಆಡಳಿತ ಮಂಡಳಿ ಕೋಶಾಧಿಕಾರಿ ಪದ್ಮರಾಜ್, ರಕ್ಷಿತ್ ಶಿವರಾಂ, ಮನಪಾ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ಮನಪಾ ಆಯುಕ್ತ ಆನಂದ್, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್,ಉಪ ಆಯುಕ್ತ ಆಯುಕ್ತ ಹರ್ಷ ವರ್ಧನ್ ಮೊದಲಾದವರು ಉಪಸ್ಥಿತರಿದ್ದರು.
ಗ್ರಾಮ ಸ್ವರಾಜ್ ಪ್ರತಿಷ್ಟಾನದ ಅಧ್ಯಕ್ಷ ಸುಭಾಶ್ ಚಂದ್ರ ಶೆಟ್ಟಿ ಸ್ವಾಗತಿಸಿದರು. ಲಾರೆನ್ಸ್ ಡಿಸೋಜಾ ವಂದಿಸಿದರು.
ಗ್ರಾಮ ಸ್ವರಾಜ್ಯದ ಆಶಯ ಎತ್ತಿ ಹಿಡಿದ ಪಥ ಸಂಚಲನ
ದ.ಕ. ಹಾಗೂ ಉಡುಪಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್‌ಗಳ ಸದಸ್ಯರು 25ಕ್ಕೂ ಅಧಿಕ ತಂಡಗಳೊಂದಿಗೆ ಗ್ರಾಮ ಸ್ವರಾಜ್ಯದ ಆಶಯಗಳನ್ನು ಎತ್ತಿಹಿಡಿಯುವ ಸ್ತಬ್ಧಚಿತ್ರ, ವೇಷಭೂಷಣಗಳೊಂದಿಗೆ ಪಥ ಸಂಚಲನದ ಮೂಲಕ ಗಮನ ಸೆಳೆದರು.
ಮಂಗಳೂರು ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು, ಬೆಳ್ತಂಗಡಿಯ ನಾರಾವಿ ಗ್ರಾ.ಪಂ.ನ ಸದಸ್ಯರು ಡಾ. ಅಂಬೇಡ್ಕರ್, ಪೊಲೀಸ್, ಲೈನ್‌ಮ್ಯಾನ್, ನ್ಯಾಯಾಧೀಶರ ವೇಷಭೂಷಣಗಳ ಮೂಲಕ ಪಥ ಸಂಚಲನದಲ್ಲಿ ಭಾಗವಹಿಸಿದ್ದರು. ಉಪ್ಪಿನಂಗಡಿ ಗ್ರಾ.ಪಂ.ನ ಸದಸ್ಯರ ತಂಡವು ಭಾರತ ಮಾತೆ, ಮಹಾತ್ಮ ಗಾಂಧೀಜಿ, ಕಂಬಳ, ತುಳುನಾಡಿನ ಪಾಡ್ದನದೊಂದಿಗೆ ಭತ್ತ ನಾಟಿಯ ಮಹಿಳೆಯರ ವೇಷ ಭೂಷಣದೊಂದಿಗೆ ಪಥ ಸಂಚಲನದಲ್ಲಿ ಛಾಪು ಮೂಡಿಸಿದರೆ, ಕುತ್ತಾರು ಗ್ರಾ.ಪಂ.ನ ಸದಸ್ಯರು, ಭಾರತ ಮಾತೆ, ಭಾರತೀಯ ಸೇನೆಯ ಜತೆಗೆ ಮಹಾತ್ಮ ಗಾಂಧಿಯವರ ದಂಡಿಯಾತ್ರೆಯನ್ನು ನೆನಪಿಸುವ ಆಕರ್ಷಕ ಛದ್ಮವೇಷದ ಮೂಲಕ ಮನಸೆಳೆದರು. ಯಡ್ತಾಡಿ ಗ್ರಾ.ಪಂ.ನ ಸದಸ್ಯರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಹೋಲುವ ಛದ್ಮವೇಶದೊಂದಿಗೆ ಪಥ ಸಂಚಲನದಲ್ಲಿ ಹೆಜ್ಜೆ ಹಾಕಿದರೆ, ಬೆಳುವಾಯಿ ಗ್ರಾ.ಪಂ. ಸದಸ್ಯರು ಸಾಲುಮರದ ತಿಮ್ಮಕ್ಕನ ಸ್ತಬ್ಧಚಿತ್ರದೊಂದಿಗೆ ಭಾಗವಹಿಸಿದ್ದರು.