ತರಬೇತಿ ಮತ್ತು ಪರಿಶ್ರಮ ನಾಯಕತ್ವ ಬೆಳೆಸಲು ಸಹಕಾರಿ: ಸ್ಪೀಕರ್ ಯು.ಟಿ. ಖಾದರ್
ʼಮೀಫ್ʼ ಶಾಲಾ ವಿದ್ಯಾರ್ಥಿ ನಾಯಕರಿಗೆ “ಮಾದರಿ ಸಂಸತ್ತು” ಕಾರ್ಯಾಗಾರ
ಮಂಗಳೂರು: ಕರ್ನಾಟಕ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ವತಿಯಿಂದ ಶಾಲಾ ವಿದ್ಯಾರ್ಥಿ ನಾಯಕ, ಉಪನಾಯಕರುಗಳಿಗೆ ವ್ಯಕ್ತಿತ್ವ ವಿಕಸನ, ನಾಯಕತ್ವ ತರಬೇತಿ ಮತ್ತು “ಮಾದರಿ ಸಂಸತ್ತು” ಕಾರ್ಯಾಗಾರ ಕೋಣಾಜೆಯ ಇನೋಳಿ ಬ್ಯಾರೀಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಭಾಂಗಣದಲ್ಲಿ ಜರಗಿತು.
ಅಧ್ಯಕ್ಷತೆಯನ್ನು ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ವಹಿಸಿದ್ದರು. ಕಾರ್ಯಾಗಾರವನ್ನು ಬ್ಯಾರೀಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಸೈಯ್ಯದ್ ಬ್ಯಾರಿ ಉದ್ಘಾಟಿಸಿದರು. ಮೀಫ್ ಗೌರವಾಧ್ಯಕ್ಷ ಉಮರ್ ಟೀಕೇ ದಿಕ್ಸೂಚಿ ಭಾಷಣ ಮಾಡಿದರು.
“ಮಾದರಿ ಸಂಸತ್ತು” ತರಬೇತಿಯನ್ನು ವೀಕ್ಷಿಸಿದ ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಜನೆಯೊಂದಿಗೆ ಪರಿಣಾಮಕಾರಿ ನಾಯಕತ್ವ ತರಬೇತಿ ಪಡೆಯುವುದರಿಂದ ಪ್ರಜಾಪ್ರಭು ತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬಲ್ಲ ಸಂವಿಧಾನದ ಆಶೆಯದಡಿ ಕೆಲಸ ನಿರ್ವಾಹಿಸಬಲ್ಲ ನಾಯಕರಾಗಿ ಬೆಳೆಯಲು ಸಾಧ್ಯವಾಗುತ್ತದೆ. ಇದರಿಂದ ಮುಂದಿನ ಭಾರತದ ಭವಿಷ್ಯ ಉಜ್ವಲವಾಗಲಿದೆ ಎಂದರಲ್ಲದೆ ಇಂಥಹ ವಿನೂತನ ಕರ‍್ಯಕ್ರಮಗಳು ಶ್ಲಾಘನೀಯ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರಿನ ಖ್ಯಾತ ಸಂಸದೀಯ ತರಬೇತುದಾರ ಅಡ್ವಕೇಟ್ ಹರೀಶ್ ಎನ್. ಭಾಗವಹಿಸಿ ಪ್ರಾತ್ಯಕ್ಷಿಕೆಯೊಂದಿಗೆ ಭಾಗವಹಿಸಿ ತರಬೇತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಅಮೇರಿಕಾದ ಟ್ರೂಗ್ಲೋಬಲ್ ಕಂಪನಿಯ ಸಿಇಒ ಇಬ್ರಾಹಿಂ ಶರೀಫ್, ಪಿ.ಯು. ವಿಭಾಗದ ಪ್ರಾಂಶುಪಾಲ ಲತೀಫ್, ಉದ್ಯಮಿ ಎಂ. ಸುನಿಲ್ ಅರೋರಾ ಭಾಗವಹಿಸಿದ್ದರು.
ವೇದಿಕೆಯಲ್ಲಿ ಮೀಫ್ ಉಪಾಧ್ಯಕ್ಷ ಕೆ.ಎಂ. ಮುಸ್ತಫ ಸುಳ್ಯ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ರಿಯಾಝ್ ಕಣ್ಣೂರು ಸ್ವಾಗತಿಸಿ, ಶೇಖ್ ರಹ್ಮತುಲ್ಲಾ ಬೂರುಜು ವಂದಿಸಿದರು. ಸಂಚಾಲಕ ಶಾರೀಕ್ ಕಾರ್ಯದರ್ಶಿ ನಿರೂಪಿಸಿದರು. ತರಬೇತಿಯಲ್ಲಿ ಭಾಗವಹಿಸಿದವರಿಗೆ ಸರ್ಟಿಫೀಕೇಟ್ ವಿತರಣೆ ಮಾಡಲಾಯಿತು. ಸುಮಾರು 60 ಶಾಲೆಗಳ ಶಾಲಾ ವಿದ್ಯಾರ್ಥಿ ನಾಯಕ ಮತ್ತು ಉಪನಾಯಕರುಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು. ಕಾರ್ಯಕ್ರಮದ ಪ್ರಾಯೋಜಕತ್ವ ವನ್ನು ಬ್ಯಾರೀಸ್ ಸಂಸ್ಥೆ ವಹಿಸಿತ್ತು.