ತುಮಕೂರಿನಲ್ಲಿ ತ್ರಿವಳಿ ಕೊಲೆ ಪ್ರಕರಣ: ಬೆಳ್ತಂಗಡಿಯ ಮನೆಗಳಿಗೆ ತಲುಪಿದ ಮೃತದೇಹ
ಬೆಳ್ತಂಗಡಿ, ಮಾ.29: ತುಮಕೂರಿನಲ್ಲಿ ಇತ್ತೀಚೆಗೆ ಬೆಳ್ತಂಗಡಿಯ ಮೂವರನ್ನು ಕೊಲೆಗೈದು ಕಾರು ಸಹಿತ ಬೆಂಕಿ ಹಚ್ಚಿ ಸುಟ್ಟು ಹಾಕಿದ ಪ್ರಕರಣದಲ್ಲಿ ಕೊಲೆಯಾದವರ ಮೃತದೇಹಗಳು ಇಂದು (ಮಾ.29) ಮುಂಜಾನೆ ಬೆಳ್ತಂಗಡಿಯ ಮನೆಗಳಿಗೆ ತಲುಪಿದೆ.
ನಡ ಗ್ರಾಮದ ಟಿ.ಬಿ. ಕ್ರಾಸ್ ನಿವಾಸಿ ಆಟೋ ಚಾಲಕ ಶಾಹುಲ್ ಹಮೀದ್, ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್ ಮತ್ತು ಶಿರ್ಲಾಲು ಗ್ರಾಮದ ಸಿದ್ದೀಕ್ ಯಾನೆ ಇಮ್ತಿಯಾಝ್ ಎಂಬವರ ಮೃತದೇಹಗಳು ಕೊಲೆಗೈದು ಕಾರು ಸಹಿತ ಸುಟ್ಟು ಹಾಕಿದ ಸ್ಥಿತಿಯಲ್ಲಿ ಮಾ.22ರಂದು ತುಮಕೂರಿನ ಕುಚ್ಚಂಗಿ ಕೆರೆ ಎಂಬಲ್ಲಿ ಪತ್ತೆಯಾಗಿದ್ದವು.
ಮೃತದೇಹಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದರಿಂದ ಗುರುತು ಪತ್ತೆ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಡಿಎನ್ ಎ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರ ವರದಿ ಬಂದಿರುವ ಕಾರಣ ಇದೀಗ ಮೂವರ ಮೃತದೇಹಗಳನ್ನು ಹಸ್ತಾಂತರಿಸಲಾಗಿದ್ದು, ಕೃತ್ಯ ಬೆಳಕಿಗೆ ಬಂದ ಏಳು ದಿನಗಳ ಬಳಿಕ ಅಂದರೆ ಇಂದು ಬೆಳಗ್ಗೆ ಉಜಿರೆಗೆ ತಲುಪಿವೆ.
ಶಾಹುಲ್ ಹಮೀದ್ ಹಾಗೂ ಇಸಾಕ್ ಅವರ ಮೃತದೇಹಗಳನ್ನು ಹಳೆಪೇಟೆ ಮುಹಿಯುದ್ದೀನ್ ಜುಮಾ ಮಸೀದಿಗೆ ಹಾಗೂ ಸಿದ್ದೀಕ್ ಅವರ ಮೃತದೇಹವನ್ನು ಶಿರ್ಲಾಲು ಮಸೀದಿಗೆ ತಂದು ಅಲ್ಲಿ ಅಂತಿಮ ದರ್ಶನ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.