ತುಳು ಲಿಪಿಗೆ ಯುನಿಕೋಡ್ ಕನ್ಸೊರ್ಟಿಯಮ್ ಶೀಘ್ರ ಸಿಗಲಿ: ದಯಾನಂದ ಕತ್ತಲ್ ಸಾರ್
ಮಂಗಳೂರು, ಸೆ.11: ತುಳು ಭಾಷೆ ಅಧಿಕೃತ ರಾಜ್ಯ ಭಾಷೆಯಾಗಬೇಕಾದರೆ, ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಬೇಕಾದರೆ ತುಳು ಲಿಪಿಗೆ ಯುನಿಕೋಡ್ ಸಿಗುವುದೂ ಒಂದು ಮಾನದಂಡವಾಗಿ ಅಗತ್ಯವಾಗಿದೆ. ಈ ಕಾರ್ಯ ಶೀಘ್ರವಾಗಿ ಆಗಬೇಕು ಎಂದು ತುಳು ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ ಸಾರ್ ಒತ್ತಾಯಿಸಿದ್ದಾರೆ.
ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಯುನಿಕೋಡ್ ಅನುಮೋದನೆ ದೊರಕಿರುವುದು ತುಳು ತಿಗಳಾರಿ ಲಿಪಿಗೆ ಎಂದರು.
ತುಳು ಲಿಪಿಗೂ ಇದಕ್ಕೂ ಶೇ.25 ವ್ಯತ್ಯಾಸವಿದೆ. ಕನ್ನಡ ಮತ್ತು ತೆಲುಗು ಲಿಪಿಗಳಿಗೆ ಸಾಮ್ಯತೆಗಳಿರುವಂತೆ ಈ ಎರಡು ಲಿಪಿಗಳಿಗೂ ಸಾಮ್ಯತೆಗಳಿವೆ. ಯು.ಬಿ.ಪವನಜ ಅಯುನಿಕೋಡಿಗೆ ಕೇವಲ ಪ್ರಸ್ತಾವವನ್ನು ಮಾತ್ರ ಕಳುಹಿಸಿರುತ್ತಾರೆ. ಯಾವುದೇ ಕಾರ್ಯವನ್ನು ಮಾಡಿರುವುದಿಲ್ಲ. 2017ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ಇ ಗರ್ವನನ್ಸ್ ಕಾರ್ಯದರ್ಶಿಯಾಗಿದ್ದ ಬೇಲೂರು ಸುದರ್ಶನ ಸಹಕಾರವನ್ನು ಪಡೆದು ತುಳು ಲಿಪಿ ರಾಜ್ಯ ಮತ್ತು ರಾಷ್ಟ್ರಮಾನ್ಯತೆ ಪಡೆಯುವಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಆಗ ಅಧ್ಯಕ್ಷ ನಾಗಿದ್ದ ನಾನು ಹಾಗೂ ರಿಜಿಸ್ಟ್ರಾರ್, ಸರ್ವ ಸದಸ್ಯರ ಪರಿಪೂರ್ಣ ಬೆಂಬಲದಿಂದ ಡಾ.ಅಕಾಶ್ ರಾಜ್ ಜೈನ್ ಸತತ ಪರಿಶ್ರಮದಲ್ಲಿ, ಜೈ ತುಳುನಾಡು ಸಂಘಟನೆಯ ಯುವಕರ ಸಹಕಾರದಿಂದ, ಯೂನಿಕೋಡ್ ಕಾರ್ಯವನ್ನು ಮುಂದುವರಿಸಲಾಯಿತು. ಈ ಹಿಂದಿನ ಅಧ್ಯಕ್ಷರಾಗಿದ್ದ ಪ್ರೊ.ವಿವೇಕ ರೈಯವರಿಂದ ಹಿಡಿದು ನಮ್ಮ ಸಮಿತಿಯವರ ವರೆಗೆ ನಿರಂತರ ಪ್ರಯತ್ನದ ಫಲ ಹೊರತಾಗಿ ಇನ್ನುಳಿದವರದ್ದಲ್ಲ. ಪ್ರಸಕ್ತ ತುಳು ಲಿಪಿ ಯೂನಿಕೋಡ್ ಸೇರ್ಪಡೆ ಕಾರ್ಯ ಸಂಪೂರ್ಣಗೊಳ್ಳಲು ಇನ್ನೂ ಸ್ವಲ್ಪ ಕೆಲಸ ಬಾಕಿ ಇದೆ. ಅದಕ್ಕೆ ಈಗಿನ ಅಕಾಡಮಿ ಅಧ್ಯಕ್ಷ ರು ಹಾಗೂ ಸದಸ್ಯರು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.
ತುಳು ಲಿಪಿಯನ್ನು ಯುನಿಕೋಡಿಗೆ ಸೇರಿಸುವ ಪ್ರಯತ್ನದ ಬಗೆಗೆ ಚರ್ಚಿಸಿ ಯುನಿಕೋಡಿಗೆ ಸೇರಿಸುವ ಕಾರ್ಯ 2017 ರಲ್ಲಿ ಆರಂಭಗೊಂಡಿದೆ. ಡಾ.ಪವನಜ ಆ ಬಗ್ಗೆ ಕೆಲಸವನ್ನ ಮಾಡುತ್ತಿದ್ದು, ಅವರನ್ನೇ ಮುಂದುವರಿಸುವುದು ಎಂದು ತೀರ್ಮಾನಿಸಿ ಅವರಿಗೆ ಜವಾಬ್ದಾರಿ ಹಾಗೂ ಈ ಬಗೆಗಾಗಿ ಸದಸ್ಯ ಸಂಚಾಲಕರಾಗಿ ಡಾ.ಆಕಾಶ್ ರಾಜ್ ಜೈನ್ ಜವಾಬ್ದಾರಿಯನ್ನು ವಹಿಸಿ ಕೊಂಡರು. ಅದಕ್ಕೂ 10 ವರ್ಷಗಳಷ್ಟು ಮೊದಲು ಬ್ರಾಹ್ಮ ಲಿಪಿ ಮೂಲದಿಂದ ಉತ್ತರ ಕನ್ನಡ ಭಾಗದಲ್ಲಿ ಪ್ರಚಲಿತವಿದ್ದ 'ತಿಗಳಾರಿ ಲಿಪಿ' ಯನ್ನು ಯುನಿಕೋಡಿಗೆ ಸೇರಿಸಲು ವೈಷ್ಣವಿ ಮೂರ್ತಿ, ವಿನೋದ್ ರಾಜ್ ರವರು ಇಟ್ಟ ಬೇಡಿಕೆಯ ಪ್ರಯತ್ನಕ್ಕೆ ಯುನಿಕೋಡ್ ಕನ್ಸೊರ್ಟಿಯಮ್ ಕ್ಯಾಲಿಫೋರ್ನಿಯಾ ದಿಂದ ತುಳು ತಿಗಳಾರಿ ಲಿಪಿ ಎಂದು ಅನುಮೋದನೆ ಈಗ ನೀಡಲಾಗಿದೆ.
ಆದರೆ ಡಾ. ಪವನಜ ವೈಯುಕ್ತಿಕ ಕಾರಣದಿಂದ ಯುನಿಕೋಡ್ ಗೆ ಕಾರ್ಯವನ್ನು ವಿಳಂಬಿಸಿದಾಗ ಅಕಾಡಮಿ ಒತ್ತಾಯಿಸಿತ್ತು. ಆ ವೇಳೆ ಅವರು ಜವಾಬ್ದಾರಿಯನ್ನು ಕೈ ಬಿಟ್ಟಾಗ, ಸರ್ವ ಸದಸ್ಯರ ಸಭೆಯಲ್ಲಿ ಇನ್ನುಳಿದವರು ವೈಯುಕ್ತಿಕವಾಗಿ ಕೊಡುವುದಕ್ಕಿಂತ, ನೇರವಾಗಿ ಸರಕಾರದ ಭಾಗವಾಗಿರುವ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯಿಂದಲೇ ಅಕಾಡಮಿಯ ಅಧ್ಯಕ್ಷನಾದ ನನ್ನ ಅಧ್ಯಕ್ಷತೆಯಲ್ಲಿ ಸದಸ್ಯ ಸಂಚಾಲಕರಾಗಿರುವ ಡಾ.ಆಕಾಶ್ ರಾಜ್ ಜೈನ್ ಯುನಿಕೋಡ್ ನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಹೀಗಾಗಿ ತುಳು ಲಿಪಿಗೆ ಯುನಿಕೋಡ್ ಮಾನ್ಯತೆ ಸಿಕ್ಕಿದೆ ಎಂಬುದು ತಪ್ಪು ಮಾಹಿತಿ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಕಾಡಮಿ ಮಾಜಿ ಸದಸ್ಯ ನಾಗೇಶ್ ಕುಲಾಲ್, ಜೈ ತುಳುನಾಡು ಅಧ್ಯಕ್ಷ ಉದಯ್ ಪೂಂಜಾ, ಸದಸ್ಯ ಕಿರಣ್ ಉಪಸ್ಥಿತರಿದ್ದರು.